ಮತ್ತೆ ಕಳಸಾ-ಬಂಡೂರಿ ಹೋರಾಟ ಕಿಚ್ಚು

12manju1
ಬೆಳಗಾವಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕಳಸಾ- ಬಂಡೂರಿ, ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿದರು. ಡಾ.ಸಂಗಮೇಶ ಕೋಳಿ, ತಿಪ್ಪನಗೌಡ ಕೆ., ಸಿ.ಆರ್. ಪಾಟೀಲ ಇತರರಿದ್ದರು.
Published on

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಕುಡಿಯುವ ನೀರು, ನೀರಾವರಿ ಯೋಜನೆಗಳಲ್ಲಿ ಪ್ರಮುಖವಾದ ಕಳಸಾ- ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸರ್ಕಾರಗಳ ನಿರ್ಲಕ್ಷೃ ಸಲ್ಲದು. ನರಗುಂದದಲ್ಲಿ ಜು.21ರಂದು ರೈತ ಹುತಾತ್ಮ ದಿನ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿ ಹೋರಾಟ ಆರಂಭಿಸಲಾಗುವುದು ಎಂದು ಕಳಸಾ- ಬಂಡೂರಿ, ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಎಚ್ಚರಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳಿಂದ ಕಳಸಾ-ಬಂಡೂರಿ ಯೋಜನೆಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷೃದಿಂದಾಗಿ ಯೋಜನೆ ವಿಳಂಬವಾಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳ ನೀರಾವರಿ ಸಚಿವರು, ರಾಜ್ಯದ ಸಂಸದರು, ಶಾಸಕರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ರೈತರ ಹೋರಾಟದ ಬಿಸಿ ಎದುರಿಸಬೇಕಾಗುತ್ತದೆ ಎಂದರು.

ಪರಿಸರವಾದಿಗಳ ಹೆಸರಿನಲ್ಲಿ ಕೆಲವರು ಕಳಸಾ-ಬಂಡೂರಿ ಯೋಜನೆ ಬಗ್ಗೆ ಪರಿಸರ ಇಲಾಖೆಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ಯೋಜನೆ ವಿರುದ್ಧ ಸ್ಥಳೀಯ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಗೋವಾ ರಾಜ್ಯದ ಪರವಾಗಿ ಧ್ವನಿ ಎತ್ತುವವರಿಗೆ ಹೋರಾಟಗಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ ಡಾ.ಸಂಗಮೇಶ ಕೋಳಿ ಮಾತನಾಡಿ, ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದಲ್ಲಿ ಯಾವುದೇ ವನ್ಯಜೀವಿಗಳಿಗೆ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಮಗ್ರ ಮಾಹಿತಿ ನೀಡಲಾಗಿದೆ. ಆದರೆ, ಕೇಂದ್ರ ಸರ್ಕಾರದ ಪರಿಸರ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಕೂಡಲೆ ಯೋಜನೆಗೆ ಅಡ್ಡಿಯಾಗಿರುವ ನಿಯಮ ತೆಗೆದು ಹಾಕಿ ಲಕ್ಷಾಂತರ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಜು.21ರಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ತಿಪ್ಪನಗೌಡ ಕಲ್ಲಗೌಡ, ಆರ್. ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net