ಲಯ ತಪ್ಪಿದ ಪ್ರವಾಸೋದ್ಯಮ

Panambooru beach
Published on

ಭರತ್ ಶೆಟ್ಟಿಗಾರ್ ಮಂಗಳೂರು

ರಾಜ್ಯದಲ್ಲಿ ಕರೊನಾ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತೆ ಆಘಾತ ಎದುರಾಗಿದೆ. ಕಳೆದ ವರ್ಷವೂ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಎರಡನೇ ಅಲೆಯಿಂದ ಪ್ರವಾಸೋದ್ಯಮ ಕ್ಷೇತ್ರ ತತ್ತರಿಸಿತ್ತು. ಈ ಬಾರಿ ಇನ್ನೇನು ಚುರುಕು ಪಡೆದುಕೊಳ್ಳುವ ನಿರೀಕ್ಷೆಯಿದ್ದಾಗಲೇ ಕೋವಿಡ್ ಕಾಟ ಶುರುವಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ ಪ್ರವಾಸೋದ್ಯಮ ಕ್ಷೇತ್ರ ನಿಧಾನವಾಗಿ ಮತ್ತೆ ಹಿಂದಿನ ಲಯಕ್ಕೆ ಮರಳಿತ್ತು. ಜನರಿಲ್ಲದ ಬೀಚ್, ದೇವಸ್ಥಾನ ಸಹಿತ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಮತ್ತೆ ಪ್ರವಾಸಿಗರು ಕಂಡುಬರಲು ಆರಂಭಿಸಿದರು. ಆದರೆ ಮೂರೇ ತಿಂಗಳಲ್ಲಿ ಇದರ ಚಿತ್ರಣ ಬದಲಾವಣೆಯತ್ತ ಸಾಗಿದೆ. ಶನಿವಾರ-ಭಾನುವಾರ ಹೊರತು ಪಡಿಸಿ, ಇತರ ದಿನಗಳಲ್ಲಿ ಪ್ರವಾಸಿಗರು ಬರುತ್ತಿಲ್ಲ. ಅದರಲ್ಲೂ ಹೊರ ಜಿಲ್ಲೆ, ರಾಜ್ಯಗಳಿಂದ ಬರುತ್ತಿರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ.

ಕರೊನಾ ಪ್ರಕರಣಗಳ ಏರಿಕೆಯಿಂದ ಡಿಸೆಂಬರ್ ಅಂತ್ಯ, ಹೊಸ ವರ್ಷದ ಆರಂಭದಲ್ಲಿ ನೈಟ್ ಕರ್ಫ್ಯೂ ಹೇರಲಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಆರಂಭವಾಯಿತು. ಎರಡು ವಾರ ವಿಧಿಸಲಾದ ವೀಕೆಂಡ್ ಕರ್ಫ್ಯೂನಿಂದ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿತ್ತು. ಬೀಚ್, ಧಾರ್ಮಿಕ ಪ್ರವಾಸೋದ್ಯಮಕ್ಕೆ ಕರಾವಳಿ ಪ್ರಸಿದ್ಧ. ಇಲ್ಲಿನ ಪಶ್ಚಿಮ ಘಟ್ಟಗಳ ಗಿರಿ ಶಿಖರಗಳು ಟ್ರೆಕಿಂಗ್‌ಗೆ ಹೆಸರುವಾಸಿ. ಆದರೆ ಸದ್ಯ ಬಹುತೇಕರು ಪ್ರವಾಸದ ಯೋಚನೆಯನ್ನೇ ಕೈಬಿಟ್ಟಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರವನ್ನು ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿರುವ ಸಾಕಷ್ಟು ಜನ ಇಲ್ಲಿದ್ದಾರೆ. ಬೀಚ್ ಬದಿ ಸ್ಟಾಲ್‌ಗಳು, ದೇವಳಗಳ ಆವರಣದಲ್ಲಿ ಅಂಗಡಿಗಳೇ ಇವರ ಆದಾಯ ಮೂಲ. ಇನ್ನೊಂದೆಡೆ ಪ್ರವಾಸಿ ತಾಣಗಳ ಪಕ್ಕದ ಲಾಡ್ಜ್‌ಗಳು, ಟೂರಿಸ್ಟ್ ಹೋಟೆಲ್‌ಗಳ ಮಾಲೀಕರು, ಪ್ರವಾಸಿ ಕಾರು, ಟ್ಯಾಕ್ಸಿಗಳ ಮಾಲೀಕರು ಮುಂದಿನ ದಿನಗಳ ಕುರಿತು ಆತಂಕಿತರಾಗಿದ್ದಾರೆ. ಇವೆಲ್ಲ ಒಂದಕ್ಕೊಂದು ಹೊಂದಿಕೊಂಡಿವೆ. ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್ ನಿರ್ಧಾರವನ್ನು ಸರ್ಕಾರ ಕೈಬಿಟ್ಟರೂ, ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದರೆ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ನೆಲಕಚ್ಚಲಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಸಹಜತೆಗೆ ಮರಳಿದರೂ ಲಾಭವಿಲ್ಲ: ಮಾರ್ಚ್ ವೇಳೆ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾದರೂ, ಶಾಲೆ-ಕಾಲೇಜುಗಳಲ್ಲಿ ಪರೀಕ್ಷೆ ಆರಂಭವಾಗುವುದರಿಂದ ಹೊರಜಿಲ್ಲೆ, ರಾಜ್ಯಗಳಿಂದ ಪ್ರವಾಸಿಗರನ್ನು ನಿರೀಕ್ಷಿಸುವಂತಿಲ್ಲ. ಏಪ್ರಿಲ್ ಮಧ್ಯಂತರ-ಮೇ ತಿಂಗಳಲ್ಲಿ ಮತ್ತೆ ಸಹಜತೆಗೆ ಮರಳಬಹುದು. ಆದರೆ ಆ ವೇಳೆಗೆ ಮಳೆಗಾಲಕ್ಕೆ ದಿನಗಣನೆ ಆರಂಭವಾಗುವುದರಿಂದ ಒಂದು ಹಂತದ ಪ್ರವಾಸೋದ್ಯಮಕ್ಕೆ ತೆರೆ ಬೀಳಲಿದೆ. ನಂತರ ಸಪ್ಟೆಂಬರ್ ತಿಂಗಳವರೆಗೆ ಕಾಯಲೇಬೇಕು. ಹಾಗಾಗಿ ಈ ಸೀಸನ್ ಕೂಡ ಪ್ರವಾಸಿಗರಿಗೆ, ಪ್ರವಾಸೋದ್ಯವನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿರುವವರಿಗೆ ಪೂರಕವಾಗಿಲ್ಲ.

ಸಾಯಂಕಾಲ ವೇಳೆ ಬೀಚ್‌ಗಳಲ್ಲಿ ಸ್ಥಳೀಯರಿರುತ್ತಾರೆ, ಆದರೆ ಪ್ರವಾಸಿಗರು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದರ ಮೇಲೆ ಪ್ರವಾಸಿಗರ ಆಗಮನ ಅವಲಂಬಿಸಿದೆ. ಯತೀಶ್ ಬೈಕಂಪಾಡಿ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿ ಯೋಜನೆ ರೂವಾರಿ ದೇವಳಗಳಲ್ಲಿ 50 ಮಂದಿಗಷ್ಟೇ ಪ್ರವೇಶ ಸೇರಿದಂತೆ ಸರ್ಕಾರದ ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಸದ್ಯ ಪ್ರವಾಸಿಗರ ಸಂಖ್ಯೆ ಕರಾವಳಿಯಲ್ಲಿ ಕುಸಿದಿದೆ. ಕರೊನಾ ಪ್ರಮಾಣ ಕಡಿಮೆಯಾದರೆ ಚೇತರಿಕೆ ಕಾಣಬಹುದು. ಮಾಣಿಕ್ಯ ಅಪರ ಜಿಲ್ಲಾಧಿಕಾರಿ (ಪ್ರಭಾರ), ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net