

ಹಗರಿಬೊಮ್ಮನಹಳ್ಳಿ: ತರಾತುರಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದು ಸಮಂಜಸವಲ್ಲ. ಒಳ ಮೀಸಲಾತಿ ಜಾರಿ ಮುನ್ನ ಸರ್ಕಾರ ತಪ್ಪುಮಾಡುವುದು ಬಿಟ್ಟು ಎಚ್ಚರಿಕೆ ವಹಿಸಲಿ ಎಂದು ಚಿತ್ರದುರ್ಗ ಸಂತ ಸೇವಾಲಾಲ್ ಮಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಭಾನುವಾರ ಆಯೋಜಿಸಿದ್ದ ಬಂಜಾರ ಸಮುದಾಯದ ಸಭೆಯಲ್ಲಿ ಮಾತನಾಡಿದರು.
ಜಾತಿ ಸಮೀಕ್ಷೆ ವೇಳೆ ತಾಂಡಗಳಲ್ಲಿ ಸಮುದಾಯದ ಜನರು ವಾಸಮಾಡದೆ ಗುಳೆ ಹೋಗಿದ್ದರು. ಆ ಸಮಯದ ವರದಿಯಂತೆ ರಾಜ್ಯದಲ್ಲಿ 14ಲಕ್ಷ ಮಾತ್ರ ಜನಸಂಖ್ಯೆ ಇದೆ ಎಂದು ತೋರಿಸಿದ್ದಾರೆ. ಆದರೆ, ಸಮುದಾಯದ ಸಂಖ್ಯೆ 30 ಲಕ್ಷ ದಾಟುತ್ತದೆ. ಪ.ಜಾತಿಯವರನ್ನು ಹೊರತುಪಡಿಸಿ ಬೇರೆಯವರು ಸಮೀಕ್ಷೆ ಮಾಡಲಿ ಎಂದು ಆಗ್ರಹಿಸಿದರು.
ಆ.16ರಂದು ಮೀಸಲಾತಿ ಕುರಿತು ಚರ್ಚೆ ನಡೆದರೆ, ನಾವು ಜಿಲ್ಲಾಧಿಕಾರಿ ಕಚೇರಿ ಹಾಗೂ ವಿಧಾನಸೌಧಕ್ಕೂ ಮುತ್ತಿಗೆ ಹಾಕುತ್ತೇವೆ. ಒಳಮೀಸಲಾತಿಯಿಂದ ನಮಗೆ ಅನ್ಯಾಯವಾಗುತ್ತೆ. ಒಟ್ಟು ಶೇ.17 ಮೀಸಲಾತಿಯಲ್ಲಿ, ಬಂಜಾರ ಸೇರಿ 4 ಸಮುದಾಯಗಳನ್ನು ಹೊರಗಿಟ್ಟು ಮೀಸಲಾತಿ ಪ್ರಕಟಿಸದಿರಲಿ. ಆ.20ರಂದು ಮರಿಯಮ್ಮನಹಳ್ಳಿಯಿಂದ ವಿಜಯನಗರ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತೇವೆೆ ಎಂದರು.
ಬಂಜಾರ ಸಮುದಾಯದ ತಾಲೂಕು ಅಧ್ಯಕ್ಷ ಸುಭಾಷ್ ನಾಯ್ಕ ಮಾತನಾಡಿ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿಯೂ ಹಿಂದುಳಿದಿದ್ದೇವೆ. ಶೇ.4.5ಮೀಸಲಾತಿ ಯಾವುದಕ್ಕೂ ಸಾಲುವುದಿಲ್ಲ. ಎಲ್ಲರಿಗೂ ಸಮಾನತೆ ನೀಡಿ ಅಥವಾ ಮೀಸಲಾತಿ ಹೆಚ್ಚಿಸಿ ಮೀಸಲಾತಿ ಪ್ರಕಟಣೆಯ ಬದಲಾಗಿ ಮತ್ತೊಮ್ಮೆ ಜಾತಿ ಸಮೀಕ್ಷೆ ನಡೆಸಬೇಕು ಎಂದರು.
ಕೋಗಳಿ ಮಠದ ಮಂಜುಸ್ವಾಮೀಜಿ, ದೂಪದಳ್ಳಿ ತಾಂಡದ ಶಕ್ತಿಪೀಠದ ಶಿವಪ್ರಕಾಶ ಸ್ವಾಮೀಜಿ, ಬಂಜಾರ ಸಮುದಾಯದ ತಾಲೂಕು ಉಪಾಧ್ಯಕ್ಷ ತುರಾಯಿನಾಯ್ಕ ಇತರರಿದ್ದರು.