

ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಸಂಸ್ಥಾಪನಾ ದಿನಾಚರಣೆ ಡಿ.29ರಂದು ಬೆಳಗ್ಗೆ 10.30ಕ್ಕೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಮೆರಿಕದಲ್ಲಿರುವ ಕಾಲೇಜಿನ ಚೇರ್ಮನ್ ಡಾ. ಹರ್ಷವರ್ಧನ ಅಗಡಿ ಕುಟುಂಬದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ತಿಳಿಸಿದರು.
ಗುರುವಾರ ಕಾಲೇಜಿನ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಿ. ವೆಂಕಪ್ಪ ಅಗಡಿ ಅವರು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೂ ಗುಣಮಟ್ಟದ ತಾಂತ್ರಿಕ ಶಿಕ್ಷಣ ಸಿಗಬೇಕೆಂಬ ಉದ್ದೇಶ ಮತ್ತು ತವರೂರಿನ ಅಭಿಮಾನದಿಂದ 2003ರಲ್ಲಿ ಪಟ್ಟಣದಲ್ಲಿ ಶ್ರೀಮತಿ ಕಮಲಾ ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಿದರು. ಕಾಲೇಜ್ ಈಗ ನಾಡಿನಾದ್ಯಂತ ಹೆಸರಾಗಿದೆ. ಕಾಲೇಜಿನಲ್ಲಿ ವಿವಿಧ ಇಂಜಿನಿಯರಿಂಗ್ ವಿಭಾಗಗಳಲ್ಲಿ 1400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ ಎಂದರು.
2023- 24ನೇ ಸಾಲಿನಲ್ಲಿ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಪ್ರಾರಂಭಿಸಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಉತ್ತಮ ವಾತಾವರಣ, ಮಹಾನಗರಗಳಲ್ಲಿ ಸಿಗುವ ಎಲ್ಲ ಸೌಲಭ್ಯಗಳೊಂದಿಗೆ ಕಾಲೇಜಿನಲ್ಲಿ ಆಧುನಿಕ ತಂತ್ರಜ್ಞಾನದೊಂದಿಗೆ ಶಿಕ್ಷಣ ಕೊಡಲಾಗುತ್ತಿದೆ. ಕಾಲೇಜಿನಲ್ಲಿ ದೇಶ- ವಿದೇಶಗಳ ಪ್ರತಿಷ್ಠಿತ ಕಂಪನಿಗಳು ಮತ್ತು ಸಂಸ್ಥೆಯ ವತಿಯಿಂದ 1 ಕೋಟಿ ರೂಪಾಯಿಗೂ ಅಧಿಕ ಠೇವಣಿ ಹಣದಲ್ಲಿ ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂಪಾಯಿ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ ಎಂದರು.
ಸಂಸ್ಥಾಪನಾ ದಿನಾಚರಣೆಗೆ ಮುಖ್ಯ ಅತಿಥಿಗಳಾಗಿ ಮುಂಬೈನ ಜೀ ಎಂಟರ್‌ಟೈನ್ಮೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಮುಕುಂದ ಗಲಗಲಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹರ್ಷವರ್ಧನ ಅಗಡಿ ವಹಿಸಲಿದ್ದಾರೆ. ಉಪಾಧ್ಯಕ್ಷೆ ಗೀತಾ ಅಗಡಿ ಮತ್ತು ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಪಾಲಕರು, ಗೌರವಾನ್ವಿತರು ಉಪಸ್ಥಿತರಿರುವರು. ವಿದ್ಯಾರ್ಥಿಗಳಿಂದ ಅನೇಕ ಪ್ರೊಜೆಕ್ಟ್‌ಗಳ ಪ್ರದರ್ಶನ ನಡೆಯಲಿದೆ ಎಂದರು.
ಸಂಸ್ಥೆಯ ಪಿಯು ಕಾಲೇಜ್ ಪ್ರಾಚಾರ್ಯ ಡಾ.ಎನ್. ಹಯವದನ, ಪ್ರೊ. ಆರ್.ಎಂ. ಪಾಟೀಲ, ಡಾ. ಸುಭಾಸ ಮೇಟಿ, ಪ್ರೊ. ವಿಕ್ರಮ ಶಿರೋಳ, ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಎಸ್.ಎಫ್. ಕೊಡ್ಲಿ, ರವಿಪ್ರಕಾಶ ಇದ್ದರು.