

ಹುಬ್ಬಳ್ಳಿ: ಯುಗಾದಿ ಬಳಿಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಯುಗಾದಿಯವರೆಗೆ ಕಾದು ನೋಡಿ. ಅಲ್ಲಿಯವರೆಗೆ ಸಮಯವಿದೆ ಎಂದಷ್ಟೇ ಹೇಳಿದರು.
ಬರಗಾಲ ಉಂಟಾಗಲು ಮನುಷ್ಯನ ಪಾಪಕರ್ಮಗಳೇ ಕಾರಣ. ಕೆಲವರ ಪಾಪಕರ್ಮಗಳಿಂದ ಎಲ್ಲರೂ ಸಾಮೂಹಿಕವಾಗಿ ಬರಗಾಲದ ಪರಿಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಮನುಷ್ಯನ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ. ಆದರೆ ಪಾಪ ಕರ್ಮಗಳನ್ನು ಕ್ಷಮಿಸುವುದಿಲ್ಲ. ಶ್ರಾವಣ ಮಾಸದ ಮಧ್ಯ ಭಾಗದಲ್ಲಿ ಮಳೆಯಾಗಿದೆ. ಈ ಅಮವಾಸ್ಯೆ ಕಳೆದ ಬಳಿಕ ಮಳೆಯಾಗುವ ಸಾಧ್ಯತೆ ಇದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅದು ಅವರವರ ವಿಚಾರ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗುವುದಿಲ್ಲ. ರಾಜ್ಯ ಸಂಪದ್ಭರಿತವಾಗಿರುತ್ತದೆ. ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಯಾವ ನೋವಿನಿಂದ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಕೆಲವರು ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರವನ್ನು ಮುನ್ನೆಲೆಗೆ ತರುತ್ತಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ಧರ್ಮ ಎಂದರೆ ನೆಮ್ಮದಿ, ಶಾಂತಿ, ನಿಜವಾದ ಜ್ಞಾನ. ಇದನ್ನು ಅರ್ಥೈಸಿಕೊಳ್ಳದವರು ಈ ರೀತಿ ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.