ಮಳೆ ನಿಂತ ನಂತರ ಗುಂಡಿ ಮುಚ್ಚುವ ಕಾರ್ಯ

01bhr 7 tdr
Published on

ಬಾಳೆಹೊನ್ನೂರು: ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಜಲ್ಲಿ ಮಿಶ್ರಿತ ಕಾಂಕ್ರೀಟನ್ನು ರಸ್ತೆಗೆ ಹಾಕಲಾಗಿದ್ದು, ಮತ್ತೆ ಮಳೆ ಹೆಚ್ಚಾಗಿರುವ ಕಾರಣ ಗುಂಡಿಗಳು ಹೆಚ್ಚಾಗಿವೆ. ಮಳೆ ಸಂಪೂರ್ಣ ನಿಂತ ನಂತರ ಕ್ಷೇತ್ರದಲ್ಲಿ ರಸ್ತೆ ಗುಂಡಿ ಮುಚ್ಚಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಕ್ಷೇತ್ರದ ಹಲವೆಡೆ ರಸ್ತೆ ಗುಂಡಿ ಮುಚ್ಚಲಾಗಿದೆ. ರಸ್ತೆ ಗುಂಡಿ ಮುಚ್ಚಲು ಕಾರ್ಯಯೋಜನೆ ತಯಾರಿಸಿದ್ದು, ಮಳೆ ನಿಂತ ತಕ್ಷಣ ಗುಂಡಿ ಮುಚ್ಚುವ ಕಾರ್ಯ ನಡೆಸಲಾಗುವುದು. ಇದೀಗ ಯಾವುದೇ ರಸ್ತೆ ಕಾಮಗಾರಿ ನಡೆಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮಳೆ ನಿಂತ ತಕ್ಷಣ ಗುಂಡಿಗಳನ್ನು ಸ್ವಚ್ಛಗೊಳಿಸಿ ಡಾಂಬರ್ ಹಾಕಿ ಗುಂಡಿ ಮುಚ್ಚಿಸಲು ತಿಳಿಸಲಾಗಿದೆ. ರಸ್ತೆ ಹಾಳಾದಲ್ಲಿ ಸಂಪೂರ್ಣ ಮರು ಡಾಂಬರೀಕಣ ಮಾಡಲಾಗುವುದು. ಇದಕ್ಕಾಗಿ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕುಂಚೂರು ಬಳಿ ಭೂ ಕುಸಿತಕ್ಕೆ 4.80 ಕೋಟಿ ರೂ.ಹಣ ಮಂಜೂರು ಮಾಡಲಾಗಿದೆ. ಗ್ರಾಮೀಣ ರಸ್ತೆಗಳನ್ನು ದುರಸ್ತಿಪಡಿಸಲು ಕಾಮಗಾರಿಗಾಗಿ ಶಿಾರಸ್ಸು ಮಾಡಲಾಗಿದೆ. ರಸ್ತೆ ಕಾಮಗಾರಿ ಕಳಪೆಯಾಗಿದ್ದರೆ ಗುತ್ತಿಗೆದಾರರಿಂದ ಮತ್ತೆ ರಸ್ತೆ ಕಾಮಗಾರಿ ಮಾಡಿಸಲಾಗುವುದು ಎಂದರು.
ಅರಣ್ಯ ಒತ್ತುವರಿ ಸಮಸ್ಯೆ ಗಂಭೀರವಾಗಿದ್ದು, ಇದಕ್ಕೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆದು ಸಭೆ ಮಾಡಲಾಗಿದೆ. ಟಾಸ್ಕ್‌ಪೋರ್ಸ್ ಸಮಿತಿ ರಚನೆ ಮಾಡಿ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರ ಆ ಕೆಲಸ ಮಾಡಿಲ್ಲ. ಇದೀಗ ಟಾಸ್ಕ್‌ಪೋರ್ಸ್ ಸಮಿತಿ ರಚನೆ ಮಾಡುವ ಕಾರ್ಯ ನಡೆಯುತ್ತಿದ್ದು, ನಂತರ ಜಂಟಿ ಸರ್ವೇ ನಡೆಸಿ, ಅರ್ಹ ರೈತರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಲಾಗುವುದು. ಮೀಸಲು ಅರಣ್ಯ ಒತ್ತುವರಿ ಮಾಡಿರುವ ದೊಡ್ಡ ಕಂಪೆನಿ, ಎಸ್ಟೇಟ್‌ಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಸಣ್ಣ , ಬಡ ರೈತರ ಒತ್ತುವರಿ ತೆರವು ಮಾಡುವುದಿಲ್ಲ. ಜಂಟಿ ಸರ್ವೇ ಬಳಿಕ ಸೆಕ್ಷನ್ 17 ಅಡಿ ಆಗಿರುವ ಒತ್ತುವರಿ ತೆರವುಗೊಳಿಸಲಾಗುವುದು. ಜನರಿಗೆ ನ್ಯಾಯ ಕೊಡಿಸಲು ನಾವು ಅಧಿಕಾರದಲ್ಲಿರ ಬೇಕೆ ಹೊರತು ರಾಜೀನಾಮೆ ನೀಡಿ ನ್ಯಾಯ ಕೊಡಿಸಲು ಆಗಲ್ಲ. ಕೆಲವರು ವಿರೋಧಕ್ಕಾಗಿ ನಮ್ಮ ರಾಜೀನಾಮೆ ಕೇಳುತ್ತಾರೆ ಆದರೆ ರಾಜೀನಾಮೆ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net