ಕೊಲೆಗೈದು ಕಾರು ಸುಟ್ಟ ಹಂತಕ?: ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ

Web car
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಬೈಂದೂರು ಸಮೀಪ ಹೇನಬೇರು ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಬುಧವಾರ ಮುಂಜಾನೆ ಕಾರು ಹಾಗೂ ಅದರೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿಯೊಬ್ಬರ ಮೃತದೇಹ ಪ್ರಕರಣ ಈಗ ತಿರುವು ಪಡೆದಿದೆ.

ಸುಟ್ಟು ಹೋದ ಕಾರಿನ ಚೇಸಿಸ್ ನಂಬರ್ ಅನ್ನು ಫಾರೆನ್ಸಿಕ್ ತಜ್ಞರ ಸಹಾಯದಿಂದ ಸ್ವಚ್ಛಗೊಳಿಸಲಾಗಿದ್ದು, ಇದರ ಆಧಾರದಲ್ಲಿ ಕಾರಿನ ಮಾಲೀಕ ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಸದಾನಂದ ಶೇರೆಗಾರ್ ಎಂದು ಗುರುತಿಸಲಾಗಿದೆ. ಈತ ಶಿರ್ವದ ಮಂಚಕಲ್ನಲ್ಲಿ ಫ್ಲಾೃಟ್ ಹೊಂದಿದ್ದಾನೆ ಎನ್ನಲಾಗಿದೆ. ಆದರೆ ಈತ ಅಥವಾ ಕಾರು ನಾಪತ್ತೆಯಾಗಿರುವ ಬಗ್ಗೆ ಯಾವುದೇ ಪ್ರಕರಣ ದಾಖಲಾಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾರು ಮಂಗಳವಾರ ರಾತ್ರಿ 12.30ಕ್ಕೆ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಪ್ರಯಾಣಿಸಿರುವುದು ತಿಳಿದು ಬಂದಿದೆ. ಸಾಸ್ತಾನ ಟೋಲ್ಗೇಟ್‌ನಲ್ಲಿ ಮಹಿಳೆಯೊಬ್ಬಳು ಕಾರಿನಿಂದ ಇಳಿದು ಬಂದು ಟೋಲ್ ನೀಡಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತಲೆಮರೆಸಿಕೊಳ್ಳಲು ನಾಟಕ: ಕಾರಿನ ಮಾಲೀಕ ಸದಾನಂದ ಶೇರೆಗಾರ್ ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ತಾನೇ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸುವ ಉದ್ದೇಶದಿಂದ ಕಾಬೆಟ್ಟು ಪರಿಸರದ ನಿವಾಸಿಯೊಬ್ಬರಿಗೆ ಅಮಲು ಭರಿತ ಪಾನೀಯ ನೀಡಿ ಕೊಲೆಗೈದಿದ್ದಾನೆ. ಬಳಿಕ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸಿ ಹೇನಬೇರು ಪ್ರದೇಶಕ್ಕೆ ಕರೆತಂದು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಇದಕ್ಕೆ ಮಹಿಳೆ ಸಾಥ್ ನೀಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಬಂದ ಕ್ಯಾನ್ ಕೂಡ ಪತ್ತೆಯಾಗಿದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದು, ಒಂದು ತಂಡ ಕಾರ್ಕಳಕ್ಕೆ ತೆರಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net