

ಹುಬ್ಬಳ್ಳಿ: ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆಸುವ ಕುರಿತು ತಜ್ಞರು ನೀಡಿದ ವರದಿಯನ್ನು ನಾನು ಪರಿಶೀಲಿಸಿಲ್ಲ. ಸದ್ಯ ಮೇ 24 ವರೆಗೆ ಕಠಿಣ ಲಾಕ್‌ಡೌನ್ ಜಾರಿಯಲ್ಲಿದೆ. ಮೇ 22 ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಲಾಕ್‌ಡೌನ್ ಮುಂದುವರಿಸುವ ಕುರಿತು ಸೂಕ್ತ ತೀರ್ಮಾನ ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂಬುದು ನನ್ನ ಸಲಹೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ ಕಿಮ್ಸ್ ಆವರಣದಲ್ಲಿ ಜಿಟೋ (ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್) ವತಿಯಿಂದ ನಿರ್ಮಿಸಲಾದ ಆಕ್ಸಿಜನ್ ಆನ್ ವೀಲ್ಸ್ ವಾಹನವನ್ನು ಕಿಮ್ಸ್‌ಗೆ ಹಸ್ತಾಂತರಿಸಿ ಮಾತನಾಡಿದರು.
ಸೋಂಕು ಹಬ್ಬುವುದನ್ನು ತಡೆಯಲು ಕಠಿಣ ಲಾಕ್‌ಡೌನ್ ಮುಂದುವರಿಸಲಾಗುವುದು. ಲಾಕ್ ಡೌನ್ ಪರಿಣಾಮದಿಂದ ಕೋವಿಡ್ ಪ್ರಕರಣ ಸಂಖ್ಯೆಯಲ್ಲಿ ಇಳಿಮುಖವಾಗಲು ಸಮಯಬೇಕು. ಬ್ಲಾಕ್ ಫಂಗಸ್ ತೀವ್ರತರನಾಗಿ ಕೋವಿಡ್‌ನಿಂದ ಬಳಲುವವರಿಗೆ ನೀಡುವ ಚಿಕಿತ್ಸೆಯ ಅಡ್ಡಪರಿಣಾಮದಿಂದ ಹೆಚ್ಚಾಗುತ್ತಿದೆ. ಈ ಕುರಿತು ತಜ್ಞ ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಅಗತ್ಯ ಇರುವ ಔಷಧಗಳನ್ನು ರಾಜ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸುವಂತೆ ಕೇಂದ್ರ ಸರ್ಕಾರದ ಆರೋಗ್ಯ ಕಾರ್ಯದರ್ಶಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದೇನೆ. ರಾಜ್ಯದ ಆರೋಗ್ಯ ಸಚಿವರು ಹಾಗೂ ಕಾರ್ಯದರ್ಶಿಗಳಿಗೆ ಟೆಂಡರ್ ಮೂಲಕ ಅಗತ್ಯ ಇರುವ ಔಷಧಗಳನ್ನು ಖರೀದಿಸುವಂತೆ ತಿಳಿಸಿದ್ದೇನೆ. ದೇಶದಲ್ಲಿ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ ಹೆಚ್ಚಿದ್ದರೂ, ಶೇಕಡವಾರು ಮರಣ ಪ್ರಮಾಣ ಕಡಿಮೆಯಿದೆ. ಕೋವಿಡ್‌ನಿಂದ ಒಬ್ಬರು ಮೃತಪಟ್ಟರೂ ಅದು ದುಃಖದ ಸಂಗತಿ ಎಂದರು.
ಕಿಮ್ಸ್‌ಗೆ 25 ಬಿ.ಎಲ್. ವೆಂಟಿಲೇಟರ್ ಹೊಸದಾಗಿ ಆಗಮಿಸಿವೆ. ಜಿಲ್ಲೆಯಲ್ಲಿ ಎಂಟತ್ತು ದಿನಗಳಿಗೆ ಆಗುವಷ್ಟು ಆಕ್ಸಿಜನ್ ಇದೆ. ಜಿಲ್ಲೆಗೆ ಅವಶ್ಯಕತೆ ಇರುವಷ್ಟು ಆಕ್ಸಿಜನ್ ಬೆಡ್‌ಗಳ ಪ್ರಮಾಣ ಹೆಚ್ಚಿಸಲಾಗುವುದು. ಕುವೈತ್‌ನಿಂದ ಆಗಮಿಸಿದ 50 ಮೆಟ್ರಕ್ ಟನ್ ಆಕ್ಸಿಜನ್‌ನ್ನನ್ನು ವಿವಿಧ ಜಿಲ್ಲೆಗೆ ಹಂಚಲಾಗುವುದು. ಸಾರ್ವಜನಿಕರು ಕೋವಿಡ್ ಆಗಮಿಸಿದ ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಿರಿ. ಆರಂಭದಲ್ಲಿ ಚಿಕಿತ್ಸೆ ಪಡೆದವರಿಗೆ ಕೋವಿಡ್‌ನಿಂದ ಹೆಚ್ಚಿನ ತೊಂದರೆಯಾಗಿಲ್ಲ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರಿ. 15 ದಿನಗಳಿಗೆ ಆಗುವಷ್ಟು ದಿನಸಿಗಳನ್ನು ಖರೀದಿಸಿ, ಪದೇ ಪದೇ ದಿನಸಿ ಖರೀದಿಸಲು ಕಿರಾಣಿ ಅಂಗಡಿಗಳಿಗೆ ತೆರಳಬೇಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.