

ತುಮಕೂರು: ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿ ಸಂಭ್ರಮಿಸೋ ತಂದೆ-ತಾಯಂದಿರಿಗೆ ‘ಕರೊನಾ’ ಸರಳ ವಿವಾಹದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದೆ.
ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಪುತ್ರನ ವಿವಾಹವನ್ನು ಅತ್ಯಂತ ಸರಳವಾಗಿ ನೆರವೇರಿಸುವುದರ ಜತೆಗೆ ಕರೊನಾ ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಜಿಲ್ಲಾಡಳಿತಕ್ಕೆ 25 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಆರ್.ಜಯದೇವರು ಕುಟುಂಬ ವಿಶೇಷ ಸಾಲಿನಲ್ಲಿ ನಿಂತಿದೆ.
ನಗರದ ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಜಯದೇವರು ಹಾಗೂ ಶಿಕ್ಷಕಿ ಎಚ್.ಪುಷ್ಪಲತಾ ಅವರು, ಪುತ್ರ ಅಮಿತ್ ಯಾದವ್- ಬೆಂಗಳೂರಿನ ಕಾವ್ಯಾ ಅವರ ವಿವಾಹವನ್ನು ಕರೊನಾ ಹಿನ್ನೆಲೆಯಲ್ಲಿ ವಿವಾಹ ಮಾರ್ಗಸೂಚಿಗಳನ್ವಯ ಗಂಗೋತ್ರಿನಗರದ ನಿವಾಸದಲ್ಲೇ ಭಾನುವಾರ ನೆರವೇರಿಸಿದ್ದು, ಈ ವಿವಾಹದಲ್ಲಿ ಆತ್ಮೀಯರಾದ 45 ಬಂಧು ಮಿತ್ರರನ್ನು ಆಹ್ವಾನಿಸಿದ್ದರು. ವಿವಾಹದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಸ್ಕ್ರೀನಿಂಗ್ ಕೂಡ ಮಾಡಲಾಯಿತು. ಸ್ವಚ್ಛತೆ ಅರಿವು ಮೂಡಿಸಲಾಯಿತು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ವೈ.ಎಂ.ರೆಡ್ಡಿ, ಪ್ರಾಚಾರ್ಯರಾದ ವಿಜಯೇಂದ್ರ, ಪ್ರೊ.ಕುಮಾರಸ್ವಾಮಿ ಸೇರಿ ಹಿರಿಯರು ವಧುವರರನ್ನು ಆಶೀರ್ವದಿಸಿದರು. ಬುಧವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನೂತನ ವಧುವರರು ಹಾಗೂ ಜಯದೇವರು ದಂಪತಿ ಸರಳ ವಿವಾಹದ ನೆನಪಿನ ಕಾಣಿಕೆಯಾಗಿ ಜಿಲ್ಲಾಡಳಿತಕ್ಕೆ 25 ಸಾವಿರ ರೂಪಾಯಿ ನೆರವು ನೀಡಿದರು. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ್ ಇತರರಿದ್ದರು.