

ಮೈಸೂರು: ಹಿರಿಯ ಪತ್ರಕರ್ತ ಎಸ್.ಪ್ರಕಾಶ್‌ಬಾಬು ಅವರ ‘ಅವರು ಹೋದಮೇಲೆ’ ಮತ್ತು ‘ಸಿನಿ ಸಾಧಕರ ಟರ್ನಿಂಗ್ ಪಾಯಿಂಟ್’ ಎಂಬ ಎರಡು ಕೃತಿಗಳನ್ನು ಮಂಗಳವಾರ ಶ್ರೀಗಣಪತಿ ಸಚ್ಚಿದಾನಂದಸ್ವಾಮೀಜಿ ಬಿಡುಗಡೆ ಮಾಡಿದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಿಮಾಲಯ ಫೌಂಡೇಷನ್ ಮತ್ತು ಬೆಂಗಳೂರಿನ ಸಿವಿಜಿ ಪಬ್ಲಿಕೇಷನ್ಸ್‌ನಿಂದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಮಾತನಾಡಿ, ಪತ್ರಕರ್ತರಾಗಿ ಸಾಹಿತ್ಯ ರೂಢಿಸಿಕೊಂಡಿರುವ ಎಸ್.ಪ್ರಕಾಶ್‌ಬಾಬು ಅವರ ಕೃತಿಗಳು ಸಾಧನೆ ಮಾಡಿ ಗತಿಸಿದ ಮತ್ತು ಸಾಧನೆ ಮಾಡುತ್ತಿರುವ ಸಾಧಕರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ತಿಳಿಸುತ್ತದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಯುವಕರಿಗೆ ಇವೆರಡೂ ಕೃತಿಗಳು ಸ್ಫೂರ್ತಿದಾಯಕವಾಗಿವೆ. ಇದೊಂದು ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಪ್ರಾಕಾರವಾಗಿಯೂ ಈ ಕೃತಿಗಳು ಗುರುತಿಸಿಕೊಳ್ಳುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಅವರು ಹೋದಮೇಲೆ ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜ ಅರಸ್ ಮತ್ತು ಕನ್ನಡ ಚಿತ್ರರಂಗದ ಮೇರು ನಟರಾದ ಡಾ.ರಾಜಕುಮಾರ್ ಸೇರಿದಂತೆ 35 ಗಮನಾರ್ಹ ವ್ಯಕ್ತಿಗಳು ಸಮಾಜದ ಮೇಲೆ ಶಾಶ್ವತವಾದ ಪ್ರಭಾವವನ್ನು ಹೇಗೆ ಬೀರಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಬಣ್ಣಿಸಿದರು.
ಹಾಗೆಯೇ ಸಿನಿ ಸಾಧಕರ ಟರ್ನಿಂಗ್ ಪಾಯಿಂಟ್ ಪುಸ್ತಕವು ಹಿರಿಯ ನಟಿಯರಾದ ಭಾರತಿ, ಜಯಂತಿ ಅವರನ್ನಲ್ಲದೆ, ಈಗಿನ ನಟರಾದ ದರ್ಶನ್ ತೂಗುದೀಪ ಸೇರಿದಂತೆ ಹಲವು ಸಿನಿ ಕಲಾವಿದರು ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಸಾಧನೆಯ ಬೆನ್ನುಹತ್ತಿ ಗೆದ್ದ ತಿರುವಿನ ಬಗ್ಗೆ ಆಸಕ್ತಿದಾಯಕ ಒಳನೋಟಗಳನ್ನು ಹಂಚಿಕೊಳ್ಳುತ್ತದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಎರಡೂ ಕೃತಿಗಳಲ್ಲಿ ಸಿನಿಮಾ ಕ್ಷೇತ್ರದವರ ವಿಷಯಗಳೇ ಹೆಚ್ಚಿದ್ದರೂ ಅದರಲ್ಲಿರುವ ಸಾಹಿತ್ಯ ಸರಸ್ವತಿ ಅಕ್ಕರೆಯಿಂದ ಸಾಧಕರನ್ನು ಕರೆದು ಪ್ರೋತ್ಸಾಹಿಸುವಂತಿದೆ. ಕೃತಿಯಲ್ಲಿ ಅಡಗಿರುವ ಸಾಧನಾ ಸ್ಫೂರ್ತಿಯನ್ನು ಯುವ ಜನರು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಾಧನೆಯ ಉತ್ತುಂಗ ಏರಬೇಕೆಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್, ಸಮಾಜಸೇವಕ ಕೆ.ರಘುರಾಮ್ ವಾಜಪೇಯಿ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ. ಹೆಗಡೆ, ಲೇಖಕ ಎಸ್.ಪ್ರಕಾಶ್‌ಬಾಬು, ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರಬಾಬು, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ ಇತರರು ಇದ್ದರು.