

ಬೆಳಗಾವಿ : ಮಹಾತ್ಮಾ ಗಾಂಧಿ ಅವರು ಭೇಟಿ ನೀಡಿದ ಐತಿಹಾಸಿಕ ಬೆಳಗಾವಿಯಲ್ಲಿ ಮಾ.20ರಂದು ರಾಹುಲ್ ಗಾಂಧಿ ಅವರು, ಭಾರತ ಜೋಡೋ ಸುಧೀರ್ಘ ಯಾತ್ರೆಯ ಬಳಿಕ ಮೊದಲ ಬಾರಿಗೆ ಬಹಿರಂಗವಾಗಿ ‘ಯುವ ಕ್ರಾಂತಿ ಸಮಾವೇಶ’ ನಡೆಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರು ರಣದೀಪ ಸುರ್ಜೆವಾಲಾ ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಲಿದ್ದು, ನಾಲ್ಕೈದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರಲ್ಲದೇ, ಬಿಜೆಪಿ ಸರ್ಕಾರವು ಕರ್ನಾಟಕದ ಯುವ ಜನಾಂಗದ ಭವಿಷ್ಯವನ್ನು ಹಾಳು ಮಾಡಿದೆ. ಪಿಎಸ್‌ಐ, ಕೆಪಿಟಿಸಿಎಲ್, ರಿಜಿಸ್ಟ್ರಾರ್ ಸೇರಿದಂತೆ ಹಾಗೂ ಪೌರ ಕಾರ್ಮಿಕರ ನೇಮಕಾತಿಯಲ್ಲೂ ಭಾರಿ ಭ್ರಷ್ಟಾಚಾರ ಎಸಗಿ ಯುವಕರ ಭವಿಷ್ಯ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗ ಖಾಲಿ ಇದ್ದರೂ, ಅರ್ಹರಿಗೆ ನೀಡದೇ, ರಾಜಕೀಯ ಲಾಭಕ್ಕಾಗಿ ರಾಜ್ಯದ್ಯಂತ ಹಿಂದು-ಮುಸ್ಲಿಂ ಸಂಘರ್ಷದಲ್ಲಿ ತೊಡಗುವಂತೆ ಮಾಡಿದ್ದಾರೆ. ರಾಜ್ಯದಲ್ಲಿ ಯುವಕರ ಸ್ಥಿತಿ ಹೇಗಿರುವಾಗ ಕಾಂಗ್ರೆಸ್ ಸರ್ಕಾರ ಬಂದರೆ ನೇಮಕಾತಿಯ ಜತೆಗೆ ಯುವಜನಾಂಗಕ್ಕೆ ಏನೆಲ್ಲ ಸೌಲಭ್ಯನೀಡಲಾಗುತ್ತದೆ ಎನ್ನುವುದು ಯುವ ಕ್ರಾಂತಿ ಸಮಾವೇಶದಲ್ಲಿ ಪ್ರಕಟಿಸಲಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರಂತೆ ರಾಹುಲ್ ಗಾಂಧಿ ಅವರೂ ರೊಡ್ ಶೋ ಮಾಡುತ್ತಾರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಸಿದ ಅವರು, ‘ಬಿಜೆಪಿ ಸರ್ಕಾರದ ಕಮಿಷನ್ ಕಾಟದಿಂದ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಮನೆಗೆ ತೆರಳಲು ಸಮಯ ಇಲ್ಲದವರು ಮಾತ್ರ ಬೆಳಗಾವಿಯಲ್ಲಿ ರೋಡ್ ಶೋ ಮಾಡುತ್ತಾರೆ. ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಗ್ಯಾಸ್ ಧರ ಹೆಚ್ಚಳವಾಗಿದ್ದರಿಂದ ಜನ ರೋಸಿಹೋಗಿದ್ದಾರೆ. ಹೀಗಿರುವಾಗ ಅಬ್ಬರದ ರೋಡ್ ಶೋ ಮಾಡುವುದಿಲ್ಲ. ಜನತೆಯ ಸಂಕಷ್ಟಕ್ಕೆ ಸ್ಪಂದಿಸದೇ ರೋಡ್ ಶೋ ಆಯೋಜಿಸುವ ಬಿಜೆಪಿಗರಿಗೆ ಅಂತಃಕರಣವಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಛೇಡಿಸಿದರು