2 ದಶಕದ ಬಳಿಕ ಶಿವಮೊಗ್ಗ ವಶಕ್ಕೆ ಕಾಂಗ್ರೆಸ್ ತವಕ

9 smg 2
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಹೆಸರು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶನಿವಾರ ಶಿವಪ್ಪನಾಯಕ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ನಗರ ಪಾಲಿಕೆ ಮಾಜಿ ಸದಸ್ಯರಾದ ಎಚ್.ಸಿ.ಯೋಗೇಶ್, ನಾಗರಾಜ ಕಂಕಾರಿ, ವಿಜಯಲಕ್ಷ್ಮೀ ಪಾಟೀಲ್ ಮುಂತಾದವರಿದ್ದರು.
Published on

ಅರವಿಂದ ಅಕ್ಲಾಪುರ ಶಿವಮೊಗ್ಗ
ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ಸುರಕ್ಷಿತ ನೆಲೆಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಒಂದೂವರೆ ದಶಕಗಳೇ ಕಳೆದಿವೆ. ಅದರಲ್ಲೂ ಕಳೆದ 25 ವರ್ಷಗಳಲ್ಲಿ ಇಲ್ಲಿ ಕಾಂಗ್ರೆಸ್ ಗೆಲುವಿನ ಸಿಹಿ ಕಾಣಲೇ ಇಲ್ಲ. ಹೀಗಾಗಿ ಈ ಬಾರಿಯಾದರೂ ಗೆಲ್ಲಲೇಬೇಕೆಂಬ ತವಕದಲ್ಲಿದೆ.

ಎರಡೂವರೆ ದಶಕಗಳಲ್ಲಿ ಪಕ್ಷದ ನಾಯಕರಲ್ಲಿನ ಸಮನ್ವಯ ಕೊರತೆ, ಅಭ್ಯರ್ಥಿ ಆಯ್ಕೆ ಗೊಂದಲ, ಮೈತ್ರಿ ಕಾರಣದಿಂದ ಕಾಂಗ್ರೆಸ್ ಲೋಕ ಅಖಾಡದಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿ, ರಾಜ್ಯದಲ್ಲಿ ಸರ್ಕಾರ ರಚನೆಯಾದರೂ ಲೋಕಸಭಾ ಚುನಾವಣೆಯಲ್ಲಿ ಎಡವಿದ್ದು ಈಗ ಇತಿಹಾಸ.
ಸಮಾಜವಾದದ ಹೋರಾಟದ ಕರ್ಮಭೂಮಿಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಬಳಿಕ ಕಾಂಗ್ರೆಸ್ ಬೇರು ಆಳವಾಯಿತು. ಆದರೆ ಪಕ್ಷಾಂತರಿಗಳ ಹೊಡೆತ, ನಾಯಕರ ತಪ್ಪು ನಿರ್ಧಾರಗಳು ಪಕ್ಷವನ್ನು ಬಸವಳಿಯುವಂತೆ ಮಾಡಿದವು. ಈಗಿನ ಚುನಾವಣೆ ಕಾಂಗ್ರೆಸ್‌ಗೆ ಅತ್ಯಂತ ಮಹತ್ವದ್ದೆನಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಸಹೋದರಿಯೇ ಈ ಬಾರಿ ಪಕ್ಷದ ಅಭ್ಯರ್ಥಿ. ಜಿಲ್ಲೆಯ ಮೂವರು ಶಾಸಕರು ರಾಜ್ಯ ಸರ್ಕಾರದ ನಿಗಮ-ಮಂಡಳಿಯಲ್ಲಿ ಸೇರಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ, ಒಂದರ್ಥದಲ್ಲಿ ಪಕ್ಷದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯೂ ಹೌದು.
ಬಿ.ಎಸ್.ಯಡಿಯೂರಪ್ಪ ಕುಟುಂಬದ ವಿರುದ್ಧ ಲೋಕಸಭಾ ಅಖಾಡದಲ್ಲಿ ನಾಲ್ಕು ಬಾರಿ ಸೋಲಿನ ಕಹಿ ಉಂಡಿರುವ ಬಂಗಾರಪ್ಪ ಕುಟುಂಬಕ್ಕೆ ಇದು ಮಹತ್ವದ ಸಂದರ್ಭ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಟ್ಟುಹಿಡಿದು ಸಹೋದರಿಗೆ ಟಿಕೆಟ್ ತಂದಿದ್ದಾರೆ. ಅವರನ್ನು ಗೆಲುವಿನ ದಡ ಸೇರಿಸುವ ದೊಡ್ಡ ಹೊಣೆಗಾರಿಕೆ ಹೆಗಲೇರಿದೆ.
ಒಳಜಗಳವೂ ಮಾರಕ: ಕಾಂಗ್ರೆಸ್‌ನಲ್ಲಿ ಟಿಕೆಟ್ ಘೋಷಣೆ ಬಳಿಕ ಅಸಮಾಧಾನ ಸ್ಫೋಟಗೊಳ್ಳುವ ಸಂದರ್ಭವೇ ಹೆಚ್ಚು. 2014ರಲ್ಲಿ ಮಂಜುನಾಥ ಭಂಡಾರಿ ಅವರನ್ನು ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ ಬಳಿಕ ಅಂದು ಕಾಂಗ್ರೆಸ್‌ನಲ್ಲಿದ್ದ ಕುಮಾರ್ ಬಂಗಾರಪ್ಪ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆರಂಭದಲ್ಲಿ ಪ್ರಚಾರ ಕಣದಿಂದಲೇ ದೂರ ಉಳಿದಿದ್ದರು. ಅವರ ಮನವೊಲಿಸಲು ಅಂದು ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರೇ ತೀರ್ಥಹಳ್ಳಿಗೆ ಬರಬೇಕಾಯಿತು. ಇದರ ಪರಿಣಾಮವಾಗಿ ಅಂದು ಕಾಂಗ್ರೆಸ್ ದೊಡ್ಡ ಅಂತರದ ಸೋಲನುಭವಿಸಿತು.
ಕುಗ್ಗಿಹೋಗಿದ್ದ ಕೈ ಪಡೆ: ಒಂದೇ ದಶಕದಲ್ಲಿ ಎರಡು ಪಕ್ಷ ಕಟ್ಟಿದ್ದು, ಮೂರು ಪಕ್ಷಗಳಿಗೆ ವಲಸೆ ಹೋದ ಬಂಗಾರಪ್ಪ, ಮಧ್ಯೆ ಮಧ್ಯೆ ಕಾಂಗ್ರೆಸ್‌ಗೂ ಬಂದು ಹೋದರು. 1996ರಲ್ಲಿ ತಾವೇ ಹುಟ್ಟುಹಾಕಿದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬಂಗಾರಪ್ಪ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಿ.ಶಿವಪ್ಪ ನಾಲ್ಕನೇ ಸ್ಥಾನಕ್ಕೆ ಕುಸಿದರು. 1998ರಲ್ಲಿ ನಡೆದ ಲೋಕ ಚುನಾವಣೆಯಲ್ಲಿ ತಮ್ಮದೇ ಆದ ಕರ್ನಾಟಕ ವಿಕಾಸ ಪಾರ್ಟಿಯಿಂದ ಸ್ಪರ್ಧಿಸಿದ ಬಂಗಾರಪ್ಪ, ಬಿಜೆಪಿ ಅಭ್ಯರ್ಥಿ ಆಯನೂರು ಮಂಜುನಾಥ್ ವಿರುದ್ಧ ಪರಾಭವಗೊಂಡರು. 1999ಕ್ಕೆ ಮತ್ತೆ ಕಾಂಗ್ರೆಸ್‌ಗೆ ಮರಳಿದ ಬಂಗಾರಪ್ಪ ಅದೇ ವರ್ಷ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2004ರ ವೇಳೆಗೆ ಮತ್ತೆ ಪಕ್ಷಾಂತರ ಮಾಡಿದ ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡರು. 2005ರಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆ ಪ್ರವೇಶಿಸಿದರು. 2009ರ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ಗೆ ಮರಳಿ ಮತ್ತೆ ಸ್ಪರ್ಧಿಸಿ ಸೋಲುಂಡರು.
ಆಯನೂರು ಹೊಡೆತ: ಬಿಜೆಪಿ ತೊರೆದು ವಿಜಯ ಮಲ್ಯ ನೇತೃತ್ವದಲ್ಲಿ ಜನತಾ ಪಕ್ಷ ಸೇರಿದ್ದ ಆಯನೂರು ಮಂಜುನಾಥ್ 2004ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಅವರಿಗೆ ಟಿಕೆಟ್ ಕೂಡ ಸಿಕ್ಕಿತು. ಗೆಲುವು ಸಿಗಲಿಲ್ಲ. 2005ರಲ್ಲಿ ನಡೆದ ಉಪಚುನಾವಣೆಯಲ್ಲೂ ಮತ್ತೆ ಆಯನೂರು ಕಾಂಗ್ರೆಸ್ ಅಭ್ಯರ್ಥಿಯಾದರು. ಆದರೆ ಈ ಚುನಾವಣೆಯಲ್ಲಿ ಮತ್ತೆ ಬಂಗಾರಪ್ಪ ಗೆದ್ದರು. ಕಾಂಗ್ರೆಸ್ ತೊರೆದ ಆಯನೂರು ಮಂಜುನಾಥ್ ಮಾತೃಪಕ್ಷಕ್ಕೆ ಮರಳಿದರು. ಈಗ 20 ವರ್ಷದ ಬಳಿಕ ಮತ್ತೆ ಆಯನೂರು ಕಾಂಗ್ರೆಸ್ ತೆಕ್ಕೆಯಲ್ಲಿದ್ದಾರೆ.
ಕೈಕೊಟ್ಟ ಮೈತ್ರಿ: ರಾಜ್ಯದಲ್ಲಿ 2018ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. 2018ರಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಇದು ಪುನರಾವರ್ತನೆಯಾಯಿತು. ಕಾಂಗ್ರೆಸ್ ಪಾಲಿಗೆ ಮೈತ್ರಿಯೂ ಫಲ ನೀಡಲಿಲ್ಲ. ಹೀಗಾಗಿ ಈ ಬಾರಿ ಗೆಲುವು ಸಾಧಿಸುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.

ಅವರೇ ಶಕ್ತಿ-ದೌರ್ಬಲ್ಯ
ಜಿಲ್ಲಾ ಕಾಂಗ್ರೆಸ್ ಪಾಲಿಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರೇ ಶಕ್ತಿ. ಅವರೇ ಆ ಪಕ್ಷದ ದೌರ್ಬಲ್ಯವೂ ಆಗಿದ್ದರು. ಸುಮಾರು ಎರಡು ದಶಕ ಬಂಗಾರಪ್ಪ ನಡೆ ಅರಿಯದೆ ಕಾಂಗ್ರೆಸ್ ಆಘಾತ ಅನುಭವಿಸಿತ್ತು. ಅವರು ಯಾವಾಗ ಪಕ್ಷಕ್ಕೆ ಬರುತ್ತಾರೆ? ಹೋಗುತ್ತಾರೆ? ಎಂಬುದನ್ನು ತಿಳಿಯದೆ ಕಾಂಗ್ರೆಸ್ ನಾಯಕರು ಗೊಂದಲಕ್ಕೆ ಒಳಗಾದರು. ಹೀಗಾಗಿ ಕಾಂಗ್ರೆಸ್‌ನಲ್ಲಿ ಓರ್ವ ಪ್ರಬಲ ಅಭ್ಯರ್ಥಿ ರೂಪುಗೊಳ್ಳಲೇ ಇಲ್ಲ. ಕೇವಲ ಚುನಾವಣೆ ಗೆಲುವಿಗೆ ಮಾತ್ರ ಗಮನಹರಿಸಿದ್ದ ಕಾಂಗ್ರೆಸ್ ಮುಖಂಡರು ಭವಿಷ್ಯದ ಬಗ್ಗೆ ಚಿಂತಿಸಲೇ ಇಲ್ಲ. ಸಮಾಜವಾದದಿಂದಲೇ ರಾಜಕೀಯದ ಮಂಚೂಣಿಗೆ ಬಂದಿದ್ದ ಬಂಗಾರಪ್ಪ, ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾದರು. ಯಾವಾಗ 1992ರಲ್ಲಿ ಸಿಎಂ ಪಟ್ಟ ಹೋಯಿತೋ ಅಲ್ಲಿಂದ ಶುರುವಾಯಿತು ಅವರ ರಾಜಕೀಯದಾಟ. ಜಿಲ್ಲೆಯಲ್ಲಿ ಪ್ರಬಲವಾಗಿದ್ದ ಈಡಿಗ ಸಮುದಾಯದೊಂದಿಗೆ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಮತಬ್ಯಾಂಕ್ ಸೃಷ್ಟಿಸಿಕೊಂಡು ಅವರು ತೆಗೆದುಕೊಂಡ ತೀರ್ಮಾನಗಳೆಲ್ಲ ದುಷ್ಪರಿಣಾಮ ಬೀರಿದ್ದು ನೇರವಾಗಿ ಕಾಂಗ್ರೆಸ್ ಮೇಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net