ಆಫ್ರಿಕಾದಿಂದ ಮಸ್ಕಿಗೆ ಬಂದ ಯುವಕನ ಆರೋಗ್ಯ ತಪಾಸಣೆ ಮಾಡಿದ ವೈದ್ಯರ ತಂಡ

210320 Maski Corona Awarness Mask
Published on

ಮಸ್ಕಿ: ಈಸ್ಟ್ ಆಫ್ರಿಕಾದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳೀಯ ಯುವಕ ಹೈದರಾಬಾದ್ ಮುಖಾಂತರ ಪಟ್ಟಣಕ್ಕೆ ಗುರುವಾರ ರಾತ್ರಿ ಬಂದ ವಿಷಯ ತಿಳಿದು ಆರೋಗ್ಯ ಅಧಿಕಾರಿಗಳ ತಂಡ ಶುಕ್ರವಾರ ಅವರ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿತು.

15 ದಿನಗಳವರೆಗೆ ಪ್ರತ್ಯೇಕ ಕೊಠಡಿಯಲ್ಲಿರಬೇಕು. ಇತರರ ಸಂಪರ್ಕ ಹೊಂದಬಾರದು. ಆರೋಗ್ಯದ ಕಡೆ ತೀವ್ರ ನಿಗಾವಹಿಸುವಂತೆ ವೈದ್ಯಾಧಿಕಾರಿ ಮೌನೇಶ ಪೂಜಾರ, ಡಾ.ದೌಲಸಾಬ್ ಮುದ್ದಾಪುರ ಯುವಕನಿಗೆ ಸೂಚಿಸಿದರು. ಆರೋಗ್ಯದಲ್ಲಿ ವ್ಯಾತ್ಯಾಸ ಕಂಡುಬಂದರೆ ತಕ್ಷಣ ವೈದ್ಯರ ಗಮನಕ್ಕೆ ತರುವಂತೆ ತಿಳಿಸಿದರು. ಕಂದಾಯ ನಿರೀಕ್ಷಕ ಕರಿಬಸವ, ಎಎಸ್‌ಐ ಮಹಾದೇವಯ್ಯ, ಗ್ರಾಮ ಲೆಕ್ಕಧಿಕಾರಿ ಅಮರೇಶ ನಾಯಕ್, ಪಂಪಾಪತಿ ನಾಯಕ ಇದ್ದರು.

ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಇಲಾಖೆ ಆಶ್ರಯದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಪಪಂ ಸದಸ್ಯ ಮುದುಕಪ್ಪ, ಮುಖಂಡ ಲಿಂಗಪ್ಪ ಪೂಜಾರ, ಬುಳ್ಳನಗೌಡ, ಪಿಸಿ ಬಸವರಾಜ, ಚಂದ್ರು ಇತರರಿದ್ದರು. ಆರೋಗ್ಯ ಇಲಾಖೆಯಿಂದ ಪ್ರತಿ ದಿನ ಪಟ್ಟಣದಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಹೋಟೆಲ್, ಬೀದಿಬದಿ ಅಂಗಡಿಗಳು, ಮಾಂಸದ ಅಂಗಡಿ, ಇತರೆ ಮಳಿಗೆಗಳನ್ನು ಬಂದ್ ಮಾಡುವಂತೆ ಮಾಲೀಕರಿಗೆ ಪಪಂ ನೋಟಿಸ್ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net