

ವಿಜಯವಾಣಿ ಸುದ್ದಿಜಾಲ ಬೈಂದೂರು
ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ಮಣ್ಣಿನ ಸವಕಳಿ ತಪ್ಪಿಸುವ ಉದ್ದೇಶದಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ತಾಲೂಕು ಯೋಜನಾಧಿಕಾರಿ ಕೆ.ವಿನಾಯಕ ಪೈ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೈಂದೂರು ತಾಲೂಕು ಘಟಕ, ಅರಣ್ಯ ಇಲಾಖೆ ಕುಂದಾಪುರ ವಲಯ, ಕೊಲ್ಲೂರು ವಲಯದ ಮೆಕ್ಕೆ ಒಕ್ಕೂಟ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸಹಯೋಗದಲ್ಲಿ ವನ್ಯಜೀವಿಗಳ ಸಂರಕ್ಷಣೆಗಾಗಿ ಮೆಕ್ಕೆ ಗ್ರಾಮದಲ್ಲಿ ಶುಕ್ರವಾರ ಹಣ್ಣಿನ ಗಿಡಗಳ ನಾಟಿಗೆ ಚಾಲನೆ ನೀಡಿ ಮಾತನಾಡಿದರು.
ಜಡ್ಕಲ್ ಸಾಮಾಜಿಕ ಅರಣ್ಯ ವಿಭಾಗದ ಅರಣ್ಯ ರಕ್ಷಕ ಗಂಗಾಧರ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಹಾಬಲ ಪೂಜಾರಿ ಶುಭ ಹಾರೈಸಿದರು. ಜಡ್ಕಲ್ ಗ್ರಾಪಂ ಸದಸ್ಯ ನಾಗೇಶ್ ನಾಯ್ಕ, ಕೊಲ್ಲೂರು ವಲಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಮೆಕ್ಕೆ ಒಕ್ಕೂಟ ಅಧ್ಯಕ್ಷ ಎಂ.ಜೆ. ಬೇಬಿ, ಮುದೂರು ಅಜಮೀರ್ ವನ್ಯಜೀವಿ ವಿಭಾಗ ಅಧಿಕಾರಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ರಾಮ ಶೆಟ್ಟಿ ವಂದಿಸಿದರು. ಕೃಷಿ ಮೇಲ್ವಿಚಾರಕ ರಾಜು ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದಲ್ಲಿ ವೃಕ್ಷಬಂಧನ ಕಾರ್ಯಕ್ರಮದಡಿ ಪ್ರಸ್ತುತ ವರ್ಷವೇ ದಶಲಕ್ಷ ಗಿಡಗಳನ್ನು ನಾಟಿ ಮಾಡುವ ಉದ್ದೇಶವಿದ್ದು, ಬೈಂದೂರು ತಾಲೂಕಿನಲ್ಲಿ ಐದು ಸಾವಿರ ಗಿಡಗಳನ್ನು ನಾಟಿ ಮಾಡಲಾಗಿದೆ. ಹಣ್ಣಿನ ಗಿಡಗಳನ್ನು ನಾಟಿ ಮಾಡಿರುವುದರಿಂದ ವನ್ಯಜೀವಿಗಳಿಗೆ ಆಹಾರ ಲಭಿಸಲಿದ್ದು, ಕಾಡು ಪ್ರಾಣಿಗಳು ನಾಡಿಗೆ ಬರುವ ಹಾವಳಿ ನಿಯಂತ್ರಿಸಬಹುದು. -ಕೆ.ವಿನಾಯಕ ಪೈ, ಧ.ಗ್ರಾ.ಯೋ. ಬೈಂದೂರು ತಾಲೂಕು ಯೋಜನಾಧಿಕಾರಿ
-ಕೆ.ವಿನಾಯಕ ಪೈ, ಧ.ಗ್ರಾ.ಯೋ. ಬೈಂದೂರು ತಾಲೂಕು ಯೋಜನಾಧಿಕಾರಿ