ಬಡವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ, ಜಯದೇವ ಹೃದ್ರೋಗ, ವಿಜ್ಞಾನ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ರವೀಂದ್ರನಾಥ್ ಹೇಳಿಕೆ

6
Published on

ಮೈಸೂರು: ಜಯದೇವ ಹೃದ್ರೋಗ ಆಸ್ಪತ್ರೆ ದೇಶದಲ್ಲಿಯೇ ಮಾದರಿ ಆಸ್ಪತ್ರೆಯಾಗಿದ್ದು ಬಡವರಿಗೆ ಕೈಗೆಟಕುವದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. ಈ ಸೇವೆಯನ್ನು ನಿರಂತರವಾಗಿ ಕಾಯ್ದುಕೊಂಡು ಹೋಗಲಾಗುವುದು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ. ರವೀಂದ್ರನಾಥ್ ಹೇಳಿದರು.
ನಗರದ ಕೆ.ಆರ್.ಎಸ್. ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆಗೆ ಶುಕ್ರವಾರ ಪ್ರಥಮ ಬಾರಿಗೆ ಭೇಟಿ ನೀಡಿ ವೈದ್ಯರು, ಸಿಬ್ಬಂದಿಯೊಂದಿಗೆ ವಿಚಾರ ವಿನಿಮಯ ಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಗಳೂರು, ಮೈಸೂರು, ಕಲ್ಬುರ್ಗಿ ಆಸ್ಪತ್ರೆಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯ ಕಟ್ಟಡದಲ್ಲಿದ್ದ ತುರ್ತು ಚಿಕಿತ್ಸಾ ಘಟಕವನ್ನು ಇನ್ಫೋಸಿಸ್ ಬ್ಲಾಕ್‌ಗೆ ಸ್ಥಳಾಂತರಿಸಲಾಗಿದೆ. ಕಲ್ಬುರ್ಗಿ ಆಸ್ಪತ್ರೆಯ ಕೆಲಸ ಮುಗಿಯುವ ಹಂತದಲ್ಲಿದ್ದು ಆಗಸ್ಟ್ ತಿಂಗಳಲ್ಲಿ ಉದ್ಘಾಟನೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮೈಸೂರು ಜಯದೇವ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಗೆ ಬರುವ ರೋಗಿಯ ಕಡೆಯವರಿಗೆ ಉಳಿದುಕೊಳ್ಳಲು ಡಾರ್ಮೆಂಟರಿಯ ನಿರ್ಮಾಣವನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಪ್ರಾರಂಭಿಸಲಾಗುವುದು. ಗುತ್ತಿಗೆ ಸಿಬ್ಬಂದಿಗೆ ಈಗಾಗಲೇ ಇನ್ಸುರೆನ್ಸ್ ಮಾಡಿಸಿದ್ದು ಆಸ್ಪತ್ರೆಯ ಎಲ್ಲ ಗುತ್ತಿಗೆ ಸಿಬ್ಬಂದಿಗೆ ಭವಿಷ್ಯ ನಿಧಿ (ಪಿಎಫ್) ನೀಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.
ನಿರ್ದೇಶಕರಾಗಿದ್ದ ಡಾ. ಸಿ.ಎನ್. ಮಂಜುನಾಥ್ ಅವರು ಆಸ್ಪತ್ರೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದಿನದಿಂದ ದಿನಕ್ಕೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಅದಕ್ಕೆ ತಕ್ಕಂತೆ ಸೌಲಭ್ಯ, ಗುಣಮಟ್ಟದ ಚಿಕಿತ್ಸೆ ನೀಡಲು ಶ್ರವಹಿಸಲಾಗುವುದು ಎಂದರು.
ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ್, ವೈದ್ಯರಾದ ಡಾ. ದಿನೇಶ್, ಡಾ.ಸಂತೋಷ್, ಡಾ.ವೀಣಾನಂಜಪ್ಪ, ಡಾ. ಎಸ್.ಹೇಮಾ, ಡಾ. ಭಾರತಿ, ಡಾ.ಮಧುಪ್ರಕಾಶ್, ಡಾ. ಜಯಪ್ರಕಾಶ್, ಡಾ.ರಜಿತ್, ಡಾ. ವಿಶ್ವನಾಥ್, ಡಾ. ಹರ್ಷ, ಡಾ.ಶ್ರೀನಿಧಿ ಹೆಗಡೆೆ, ಡಾ. ಸಚಿನ್, ಡಾ. ಅಶ್ವಿನಿ, ಡಾ.ನಂಜಪ್ಪ, ಡಾ. ಮಂಜುನಾಥ್, ನಿರ್ದೇಶಕರ ಆಪ್ತ ಸಹಾಯಕ ಸಾಧಿಕ್ ಪಾಷಾ, ನರ್ಸಿಂಗ್ ಅಧೀಕ್ಷಕಿ ಕೆ.ಯೋಗಲಕ್ಷ್ಮಿ, ಪಿಆರ್‌ಒ ವಾಣಿ, ಚಂಪಕಮಾಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net