ಪುಷ್ಠಿ ಪ್ರಶಸ್ತಿ ಆಯ್ಕೆಯಲ್ಲಿ ಅನ್ಯಾಯ

17 ylb photo 01
ಯಲಬುರ್ಗಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗ ಮಕ್ಕಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮಕ್ಕಳ್ಳಿ ಗ್ರಾಮಸ್ಥರಾದ ನೀಲನಗೌಡ ಹೊಸಮನಿ, ಗಾಳೇಪ್ಪ ಹರಿಜನ, ದೇವಪ್ಪ ಆರೇರ, ಶ್ರೀಧರ ಆರೇರ, ಹನುಮಗೌಡ ಮಾಲಿಪಾಟೀಲ ಇತರರಿದ್ದರು.
Published on

ಯಲಬುರ್ಗಾ: ಪುಷ್ಠಿ ಪ್ರಶಸ್ತಿ ಆಯ್ಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ಮಕ್ಕಳ್ಳಿ ಗ್ರಾಮಸ್ಥರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಎಸ್ಡಿಎಂಸಿ ಅಧ್ಯಕ್ಷ ಶೇಖರಗೌಡ ಪಾಟೀಲ್ ಮಾತನಾಡಿ, ಸರ್ಕಾರದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ಪುಷ್ಠಿ ಯೋಜನೆಯಡಿ ಪ್ರಶಸ್ತಿ ನೀಡಲಾಗುತ್ತದೆ. ಮಕ್ಕಳ್ಳಿಯ ಶಾಲೆಯು ನಿಯಮಾವಳಿಗಿಂತ ಹೆಚ್ಚಿನ ಸಾಧನೆ ಮಾಡಿದೆ. ಆದರೆ ಪ್ರಶಸ್ತಿ ಆಯ್ಕೆಯಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗೆ ಶಿಕ್ಷಣ ಇಲಾಖೆ ಹಲವು ಅಧಿಕಾರಿಗಳ ತಂಡ ಆಗಮಿಸಿ ಪ್ರಶಸ್ತಿಗೆ ಆಯ್ಕೆಯಾಗುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಅರ್ಜಿ ಸಲ್ಲಿಸಲಾಗಿತ್ತು. ಪ್ರಶಸ್ತಿ ಬರುವ ನಿರೀಕ್ಷೆಯಲ್ಲಿದ್ದಾಗ ನಿರಾಸೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ಮಾಜಿ ತಾಲೂಕು ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ಮಾತನಾಡಿದರು.

ಡಿಡಿಪಿಐ ಕಚೇರಿಯ ಅಧಿಕಾರಿ ಎಪಿಸಿಒ ಆಂಜನೇಯಪ್ಪ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ಮಾತ್ರ ಡಿಡಿಪಿಐ ಆಗಮಿಸಬೇಕು. ನಮಗೆ ನ್ಯಾಯ ದೊರಕಿಸಿಕೋಡಬೇಕು ಎಂದು ಪಟ್ಟುಹಿಡಿದರು.

15 ದಿನ ಕಾಲಾವಕಾಶ ನೀಡಿ. ಮತ್ತೊಮ್ಮೆ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಲಿದೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಿ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಗ್ರಾಮಸ್ಥರ ಅಧಿಕಾರಿಗಳು ಸಮಾಧಾನಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net