

ಚಿಕ್ಕೋಡಿ: ಜನಸಂಖ್ಯೆ ಹೆಚ್ಚಾದಂತೆ ಜನರು ಊರಿನಿಂದ ಊರಿಗೆ ವಲಸೆ ಹೋಗಿ ತೋಟಪಟ್ಟಿ ಪ್ರದೇಶದಲ್ಲಿ ವಸತಿ ಮಾಡಿಕೊಳ್ಳುತ್ತಿರುವುದರಿಂದ ಸಂಬಂಧಗಳು ಕಳಚಿಹೋಗುತ್ತಿವೆ. ಹೀಗಾಗಿ ಹಬ್ಬ ಹರಿದಿನಗಳ ಆಚರಣೆಗೆ ಮಹತ್ವ ಸಿಗುತ್ತಿಲ್ಲ ಎಂದು ಕೊಲ್ಲಾಪುರ ಕನ್ಹೇರಿಯ ಶ್ರೀಸಿದ್ಧಗಿರಿ ಸಂಸ್ಥಾನ ಮಠದ ಪೂಜ್ಯ ಜಗದ್ಗುರು ಶ್ರೀಅದೃಶಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಸದಲಗಾ ಪಟ್ಟಣದ ಶ್ರೀಶಿವಾನಂದ ಮಠ ಗೀತಾಶ್ರಮದಲ್ಲಿ ಆಯೋಜಿಸಿದ್ದ ಶ್ರೀಮದ್ ಭಗವದ್ಗೀತಾ ಜಯಂತಿ ಹಾಗೂ ಗುರು ಆರಾಧನಾ ಮಹೋತ್ಸವದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜನರು ಸಂಬಂಧಗಳನ್ನು ಕಳೆದುಕೊಳ್ಳುತ್ತಾ ಹೋದರೆ, ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುವ ಸಮುದಾಯಗಳ ಸೃಷ್ಟಿ ಅಗತ್ಯ ಎಂದರು.
ಸದಲಗಾ ಶ್ರೀಶಿವಾನಂದ ಮಠದ ಪೂಜ್ಯ ಶ್ರೀಡಾ.ಶ್ರದ್ಧಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶರಣ ಶಿಕ್ಷಕ ವಿರೇಶ ಪಾಟೀಲ, ಶಿವಾನಂದ ಕಮತೆ ನಿರೂಪಿಸಿದರು. ನ್ಯಾಯವಾದಿ ಮಾರುತಿ ಕುಂಬಾರ ವಂದಿಸಿದರು.