ಏರೋ ಇಂಡಿಯಾ 2021ರಲ್ಲಿ ಅಮೆರಿಕದ ಉನ್ನತಮಟ್ಟದ ನಿಯೋಗ ಭಾಗಿ; ಇಲ್ಲಿದೆ ಪ್ರಮುಖ ರಕ್ಷಣಾ ಸಹಭಾಗಿಗಳ ವಿವರ

Air Show
Published on

ಬೆಂಗಳೂರು: ಏರೋ ಇಂಡಿಯಾ-2021ರ ಕಾರ್ಯಕ್ರಮದಲ್ಲಿ ಡಾನ್ ಹೆಫ್ಲಿನ್ - ಅಮೆರಿಕದ ಶಾರ್ಜೆ ಡಿ ಅಫೇರ್ಸ್ ಅವರ ನೇತೃತ್ವದಲ್ಲಿ ಅಮೆರಿಕನ್ ಅಧಿಕಾರಿಗಳು ಹಾಗೂ ರಕ್ಷಣಾ ಉದ್ಯಮದ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವು ಭಾಗವಹಿಸಲಿದೆ. ಈ ಮೂಲಕ ಏರ್​ ಶೋನಲ್ಲಿ ಅಮೆರಿಕ ಭಾಗವಹಿಸುತ್ತಿರುವುದು ಭಾರತ-ಅಮೆರಿಕ ನಡುವಿನ ವ್ಯೂಹಾತ್ಮಕ ಸಹಭಾಗಿತ್ವ ಹೆಚ್ಚು ಆಳವಾಗಿ ಬೇರೂರುತ್ತಿರುವುದರ ಸಂಕೇತ ಎನ್ನಲಾಗಿದೆ.

“ನಮ್ಮ ಪ್ರಮುಖ ರಕ್ಷಣಾ ಸಹಭಾಗಿ ಆಗಿರುವ ಭಾರತದೊಂದಿಗೆ ಅಮೆರಿಕ ಹೊಂದಿರುವ ಉತ್ತಮ ಸಂಬಂಧದ ಮುಂದುವರಿಕೆಯಾಗಿ ಅಮೆರಿಕ ನಿಯೋಗದ ಮುಂದಾಳತ್ವವನ್ನು ವಹಿಸಲು ನನಗೆ ಬಹಳ ಸಂತೋಷವಾಗಿದೆ” ಎಂದು ಹೆಫ್ಲಿನ್ ಹೇಳಿದ್ದಾರೆ. “ಏರೋ ಇಂಡಿಯಾ 2021 ನಮ್ಮ ದೇಶಗಳ ನಡುವಿನ ಅತ್ಯಂತ ಆಪ್ತ ದ್ವಿಪಕ್ಷೀಯ ರಕ್ಷಣಾ ಸಂಬಂಧದ ಮುಂದುವರಿಕೆಯ ಪ್ರತೀಕವಾಗಿದ್ದು, ಮುಕ್ತ ಹಾಗೂ ಸ್ವತಂತ್ರ ಇಂಡೋ ಪೆಸಿಫಿಕ್ ಪ್ರದೇಶದ ಬಗ್ಗೆ ಇರುವ ದೂರದೃಷ್ಟಿಯ ಭಾಗವಾಗಿದೆ” ಎಂದೂ ಅವರು ಹೇಳಿದ್ದಾರೆ.

ಏರೋ ಇಂಡಿಯಾ 2021ರಲ್ಲಿ ಅಮೆರಿಕದ ಭಾಗವಹಿಸುವಿಕೆಯು ಅಮೆರಿಕದ ಉದ್ಯಮಗಳು ಹಾಗೂ ಅಮೆರಿಕನ್ ರಕ್ಷಣಾ ಸೇವೆಗಳಿಗೆ ಭಾರತದೊಂದಿಗೆ ಹೆಚ್ಚಿನ ’ಮಿಲಿಟರಿಯಿಂದ-ಮಿಲಿಟರಿಗೆ’ ರಕ್ಷಣಾ ಸಂಬಂಧಗಳನ್ನು ಹೊಂದಲು ಅವಕಾಶವಾಗುತ್ತದೆ. ನಮ್ಮ ಎರಡೂ ಸೇನೆಗಳು ಇಂಡೋ ಪೆಸಿಫಿಕ್​ನಲ್ಲಿ ನಿಯಮಾಧಾರವಾದ ಅಂತಾರಾಷ್ಟ್ರೀಯ ವ್ಯವಸ್ಥೆ ಮುಂದುವರಿಸಲು ಕಾರ್ಯನಿರ್ವಹಿಸುತ್ತವೆ. ಏರೋ ಇಂಡಿಯಾ 2021ರಲ್ಲಿ ಅಮೆರಿಕದ ಸಾರ್ವಜನಿಕ ಹಾಗೂ ಖಾಸಗಿ ಭಾಗವಹಿಸುವಿಕೆಯು ಕಾರ್ಯತಂತ್ರ ಸಹಭಾಗಿಯಾಗಿ ಭಾರತಕ್ಕೆಇರುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ ಎಂದಿದ್ದಾರೆ.

ಅಮೆರಿಕ ಸರ್ಕಾರದ ನಿಯೋಗದ ವಿವರ

  • ಡಾನ್ ಹೆಫ್ಲಿನ್ ಶಾರ್ಜೆ ಡಿ ಆಫೇರ್ಸ್, ಏ ಐ
  • ಮಿಸ್ ಕೆಲ್ಲಿ ಎಲ್, ಸೇಯ್ಬಾಲ್ಟ್ ಏರ್ ಫೋರ್ಸ್, ಉಪ ಅಧೀನಾಧಿಕಾರಿಗಳು, ಅಂತಾರಾಷ್ಟ್ರೀಯ ವ್ಯವಹಾರ
  • ಲೆಫ್ಟಿನೆಂಟ್ ಜನರಲ್ ಡೇವಿಡ್ ಏ ಕ್ರಮ್, 11ನೆ ವಾಯುಸೇನಾ ಕಮಾಂಡರ್
  • ಮೇಜರ್ ಜನರಲ್ ಮಾರ್ಕ್ ಈ ವೆದರಿಂಗ್ಟನ್, 8ನೇ ವಾಯುಸೇನಾ ಕಮಾಂಡರ್
  • ಬ್ರಿಗೇಡಿಯರ್ ಜನರಲ್ ಬ್ರಯನ್ ಬ್ರಕ್ಬಾರ್, ನಿರ್ದೇಶಕರು - ವಾಯುಸೇನಾ ರಕ್ಷಣಾ ಸಹಕಾರ ಮತ್ತು ಸಹಯೋಗ ನಿರ್ದೇಶನಾಲಯ
  • ಜುಡಿತ್ ರವಿನ್, ಕೌನ್ಸಲ್ ಜನರಲ್, ಅಮೆರಿಕ ದೂತಾವಾಸ, ಚೆನ್ನೈ
  • ಐಲೀನ್ ನಂದಿ, ವಾಣಿಜ್ಯ ವ್ಯವಹಾರ ಆಪ್ತ ಸಚಿವರು. ಅಮೆರಿಕ ವಾಣಿಜ್ಯ ಸೇವೆ,
  • ರೇರ್ ಅಡ್ಮಿರಲ್ ಐಲೀನ್ ಲೌಬಾಷರ್, ಡಿಫೆನ್ಸ್ ಅಟಾಚೆ, ಅಮೆರಿಕ ದೂತಾವಾಸ, ನವದೆಹಲಿ

ಭಾಗವಹಿಸುವ ಪ್ರಮುಖ ಸಂಸ್ಥೆಗಳು: ಅಮೆರಿಕದ ಪ್ರಮುಖ ರಕ್ಷಣಾ ಕಂಪನಿಗಳನ್ನು ಮೊದಲುಗೊಂಡು ಏರೋ ಇಂಡಿಯಾ 2021ರಲ್ಲಿ ಏರೋಸ್ಪೇಸ್ ಕ್ವಾಲಿಟಿ ರೀಸರ್ಚ್ ಆ್ಯಂಡ್​ ಡೆವಲಪ್ಮೆಂಟ್ ಎಲ್​ಎಲ್​ಸಿ ಏರ್​ಬಾರ್ನ್​ ಇಂಕ್, ಬೋಯಿಂಗ್, ಎಇಇಎಚ್ ಕಾರ್ಪೋರೇಷನ್, ಜಿಇ ಏವಿಯೇಷನ್, ಜನರಲ್ ಆಟೊಮಿಕ್ಸ್, ಹೈ-ಟೆಕ್ ಇಂಪೋರ್ಟ್ ಎಕ್ಸ್​ಪೋರ್ಟ್​ ಕಾರ್ಪೋರೇಷನ್, ಎಲ್​ಥ್ರೀ ಹ್ಯಾರಿಸ್, ಲಾವೆರ್ಸಬ್ ಇಂಡಿಯಾ, ಲಾಕ್ ಹೀಡ್ ಮಾರ್ಟಿನ್, ರೇದಿಯಾನ್ ಹಾಗೂ ತ್ರಾಕಾ ಸಿಸ್ಟಮ್ಸ್​ ಭಾಗವಹಿಸುತ್ತಿವೆ.

ಫ್ಲೈ ಬೈ ಪ್ರದರ್ಶನ: ಈ ಪ್ರದರ್ಶನದ ಅತಿ ಮುಖ್ಯ ಆಕರ್ಷಣೆ ಎಂದರೆ ಬಿ-1ಬಿ ಲ್ಯಾನ್ಸರ್ ಹೆವಿ ಬಾಂಬರ್ ನೀಡಲಿರುವ ’ಫ್ಲೈ ಬೈ’ ಪ್ರದರ್ಶನ. 28ನೇ ಬಾಂಬ್ ವಿಂಗ್​ಗೆ ಸೇರಿದ ಎಲ್ಸ್​ವರ್ತ್ ವಾಯುನೆಲೆ ದಕ್ಷಿಣ ಡಕೋಟಾದಲ್ಲಿರುವ ಲ್ಯಾನ್ಸರ್ ಹೆವಿ ಬಾಂಬರ್ ಇದಾಗಿದ್ದು, ಅಮೆರಿಕದ ನೆಲೆಗಳಿಂದ ಉದ್ದೇಶಿತ ಮಿಷನ್​ಗಳನ್ನು ಪೂರೈಸಿದೆ. ಅಮೆರಿಕದಲ್ಲೇ ಅತ್ಯಂತ ಹೆಚ್ಚು ಸಾಂಪ್ರದಾಯಿಕ ಪೇ ಲೋಡ್ ಹೊತ್ತು ನಿರ್ದೇಶಿತ ಮತ್ತು ಅನಿರ್ದೇಶಿತ ಅಸ್ತ್ರಗಳನ್ನು ಸಾಗಿಸುತ್ತದೆ. ಇದು ಅಮೆರಿಕದ ಲಾಂಗ್-ರೇಂಜ್ ಬಾಂಬರ್ ಫೋರ್ಸ್​ನ ಬೆನ್ನೆಲುಬು ಎಂದೇ ಹೇಳಲಾಗುತ್ತದೆ.

ದ್ವಿಪಕ್ಷೀಯ ಸಂಬಂಧದ ಗುರುತಾಗಿ ಭಾರತದ ಮೊದಲ ಹೈಬ್ರಿಡ್ ರಕ್ಷಣಾ ಪ್ರದರ್ಶನಕ್ಕೆ ಇಂಬು ಕೊಡುವ ದೃಷ್ಟಿಯಲ್ಲಿ ಹವಾಯಿಯಲ್ಲಿನ ಅಮೆರಿಕ ವಾಯುಪಡೆಯ ಸಂಗೀತ ತಂಡವು ಭಾರತೀಯ ತಾಳವಾದ್ಯವಾದ ಘಟಂ ಕಛೇರಿ ಏರ್ಪಡಿಸಿದೆ. ಕಲಾವಿದರಾದ ಗಿರಿಧರ ಉಡುಪ ಅವರು ಈ ಸಂಗೀತ ಪ್ರದರ್ಶನ ನೀಡಲಿದ್ದಾರೆ. ಈ ಸಂಗೀತದ ರಸದೌತಣವನ್ನು ಅಮೆರಿಕ ದೂತಾವಾಸದ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂ ಪೇಜ್​ಗಳಲ್ಲಿ ಮುಂಬರುವ ದಿನಗಳಲ್ಲಿ ಬಿತ್ತರಿಸಲಾಗುತ್ತದೆ.

ಕರೊನಾ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ: ಅಮೆರಿಕ ಸರ್ಕಾರದ ನಿಯೋಗವು ಭಾರತ ಸರ್ಕಾರ ಹಾಗೂ ಅಮೆರಿಕ ರಕ್ಷಣಾ ಇಲಾಖೆಯ ಶಿಷ್ಟಾಚಾರಗಳನ್ನು ಹಾಗೂ ಕೋವಿಡ್ 19 ಹರಡದಂತೆ ತೆಗೆದುಕೊಳ್ಳಬೇಕಾದ ಅವಶ್ಯಕ ಕ್ರಮಗಳನ್ನು ಅತ್ಯಂತ ಕಾಳಜಿಯಿಂದ ಪಾಲಿಸಲಿದೆ. ಈ ಕ್ರಮಗಳಲ್ಲಿ ಪ್ರಯಾಣಕ್ಕೂ 72 ಘಂಟೆಗಳ ಮುನ್ನ ಕೋವಿಡ್ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪಡೆದುಕೊಳ್ಳುವುದು ಹಾಗೂ ವೈರಸ್ ಹರಡದಂತೆ ಕಡ್ಡಾಯವಾಗಿ ಮಿಲಿಟರಿ ವಿಮಾನದಲ್ಲೇ ಪ್ರಯಾಣಿಸುವುದು ಮತ್ತು ಸದರಿ ವ್ಯಾಪಾರ ಪ್ರದರ್ಶನ ಆಯೋಜಕರು ಸ್ಪಷ್ಟಪಡಿಸಿರುವ ಮಾರ್ಗಸೂಚಿಯನ್ನು ಅನುಸರಿಸುವುದು ಕೂಡ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net