

ಬೆಂಗಳೂರು: ಏರ್ ಶೋ ವೀಕ್ಷಣೆಗೆ ತೆರಳಿದ್ದ ನಾಗರಿಕರು, ಪ್ರದರ್ಶಕರು, ಮಾಧ್ಯಮದವರು ಸೇರಿ ಎಲ್ಲರನ್ನೂ ಒಂದೇ ಪ್ರವೇಶದ್ವಾರದ ಮೂಲಕ ಒಳಬಿಡುತ್ತಿದ್ದ ಕಾರಣ ಮಂಗಳವಾರ ಕಿ.ಮೀ. ಉದ್ದಕ್ಕೂ ಜನರು ಕ್ಯೂನಲ್ಲಿ ನಿಲ್ಲುವ ಶಿಕ್ಷೆಗೆ ಒಳಗಾದರು.
ವಾಯುಪಡೆ ರಕ್ಷಣಾ ಸಿಬ್ಬಂದಿ ದಿಢೀರ್ ಆಗಿ ಒಳಪ್ರವೇಶದ ಸ್ಥಳ ಹಾಗೂ ತಪಾಸಣೆ ವ್ಯವಸ್ಥೆಯನ್ನು ಬಿಗಿ ಮಾಡಿದ್ದರಿಂದ ಜನರು ಮೇಳದ ಸ್ಥಳ ತಲುಪಲು ಪರದಾಡಿದರು. ಎಲ್ಲರೂ 2ಎ ದ್ವಾರದ ಮೂಲಕ ಒಳಪ್ರವೇಶಿಸಬೇಕು ಎಂದು ಸಿಬ್ಬಂದಿ ಪಟ್ಟು ಹಿಡಿದ ಕಾರಣ ಬೆಳಗ್ಗೆ 9 ಗಂಟೆಯಿಂದಲೇ ಬಳ್ಳಾರಿ ರಸ್ತೆಯಲ್ಲಿ ಉದ್ದನೆಯ ಕ್ಯೂ ಕಂಡುಬಂತು. ಪ್ರವೇಶ ಪತ್ರದಲ್ಲಿ ಕ್ಯೂಆರ್ ಕೋಡ್ ಇದ್ದರೂ, ಅದನ್ನು ಸ್ಕಾೃನ್ ಮಾಡಲು ಇಬ್ಬರೇ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಗುರುತಿನ ಚೀಟಿ ಪರಿಶೀಲನೆ, ಲೋಹ ಶೋಧಕದಿಂದ ತಪಾಸಣೆಗೆ ಒಳಗಾಗಬೇಕಿದ್ದರಿಂದ ಹೆಚ್ಚಿನ ಸಮಯ ವ್ಯಯವಾಗುತ್ತಿತ್ತು. ಬಿಸಿಲಲ್ಲಿ ನಿಲ್ಲಲು ಪ್ರದರ್ಶಕರು, ಸಾರ್ವಜನಿಕರು ತಮ್ಮ ಕೋಟ್, ಕರವಸ, ವೇಲ್ ಹಿಡಿದು ಸ್ವಲ್ಪಮಟ್ಟಿನ ಝಳದಿಂದ ತಪ್ಪಿಕೊಳ್ಳಬೇಕಾಯಿತು.
ಹೆಚ್ಚುವರಿ ಕೌಂಟರ್‌ಗಳನ್ನು ತೆಗೆಯಲು ವಾಯುಪಡೆ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಇತರ ಕಡೆಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ನಾಗರಿಕರ ಮನವಿಗೆ ಪುರಸ್ಕಾರ ಸಿಗಲಿಲ್ಲ. ಇದೇ ರೀತಿ ವ್ಯವಸ್ಥೆ ಇದ್ದಲ್ಲಿ ಮೇಳದ ಕೊನೆಯ 2 ದಿನ ಹೆಚ್ಚಿನ ವೀಕ್ಷಕರು ಆಗಮಿಸಿದ್ದಲ್ಲಿ ಮತ್ತಷ್ಟು ಗೊಂದಲ ಹಾಗೂ ಅನಗತ್ಯ ಟ್ರಾಫಿಕ್ ಜಾಮ್‌ಗೆ ಅವಕಾಶವಾಗುವುದಿಲ್ಲವೇ ಎಂಬ ಮಾತುಗಳು ಕೇಳಿಬಂದವು.