

ಬೆಂಗಳೂರು: ಜಾಗತಿಕ ಮಟ್ಟದ ‘ಏರೋ ಇಂಡಿಯಾ’ ವೈಮಾನಿಕ ಮೇಳದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಯಲಹಂಕದ ವಾಯುಪಡೆ ತರಬೇತಿ ಕೇಂದ್ರ ಹಾಗೂ ಬಳ್ಳಾರಿ ರಸ್ತೆ (ಏರ್‌ಪೋರ್ಟ್ ರೋಡ್) ಸುತ್ತಲು ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಕೈಗೊಳ್ಳಲು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.
ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಮೇಳಕ್ಕೆ ವಿಶ್ವದ ವಿವಿಧ ರಾಷ್ಟ್ರಗಳಿಂದ ನೂರಾರು ಗಣ್ಯರು ಹಾಗೂ ಉದ್ಯಮಿ/ನಿಯೋಗಗಳು ಆಗಮಿಸುತ್ತವೆ. ಕೋಟ್ಯಂತರ ರೂಪಾಯಿ ಮೊತ್ತದ ಹೂಡಿಕೆಗೆ ಅವಕಾಶ ಮಾಡಿಕೊಡಲಿರುವ ಏರೋ ಇಂಡಿಯಾವನ್ನು ರಕ್ಷಣಾ ಇಲಾಖೆ ಸಂಘಟಿಸಿದೆ. ಇದಕ್ಕೆ ಪೂರಕವಾಗಿ ಮೂಲಸೌಕರ್ಯ ಹಾಗೂ ಇತರ ಸೌಲಭ್ಯವನ್ನು ಪಾಲಿಕೆ ಹಾಗೂ ಜಿಲ್ಲಾಡಳಿತ ವಹಿಸಿಕೊಂಡಿದ್ದರೂ, ಮೇಳ ಆರಂಭವಾಗಲು ಕೆಲ ದಿನ ಮಾತ್ರ ಬಾಕಿ ಇದೆ. ಆದರೂ, ಮೇಳದ ಸುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಿಲ್ಲ. ನಗರದಿಂದ ವಾಯುಪಡೆ ತರಬೇತಿ ಕೇಂದ್ರ ತಲುಪುವ ಬಳ್ಳಾರಿ ರಸ್ತೆಯುದ್ದಕ್ಕೂ ಸೌಂದರ್ಯಿಕರಣದ ಕೆಲಸಗಳು ಪೂರ್ಣವಾಗಿ ಆರಂಭವಾಗಿಯೇ ಇಲ್ಲ.
ಕಾರ್ಯಕ್ರಮದ ಪೂರ್ವ ಸಿದ್ಧತೆ ಹಿನ್ನೆಲೆ ಒಂದು ತಿಂಗಳ ಹಿಂದೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಂಬಂಧಿತ ಇಲಾಖೆಗಳ ಸಭೆ ನಡೆದು ಸಿದ್ಧತೆ ನಡೆಸಬೇಕಾಗುತ್ತದೆ. ಇದರ ಮಾಹಿತಿಯನ್ನು ರಕ್ಷಣಾ ಇಲಾಖೆಗೂ ರವಾನಿಸಬೇಕಾಗುತ್ತದೆ. ಆದರೆ, ಕಾಟಾಚಾರಕ್ಕಾಗಿ ಸಭೆ ನಡೆಸಿ ಮೂಲಸೌಕರ್ಯಕ್ಕಾಗಿ ಅನುದಾನ ಬಿಡುಗಡೆ ಹಾಗೂ ಬಳಕೆ ಮಾಡುವಲ್ಲಿ ವೈಲ್ಯ ಕಾಣಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ನಗರ ಡಿಸಿ ವಿವಿಧ ಇಲಾಖೆಗಳ ಸಭೆ ನಡೆಸಿ ಕೆಲಸ ಆರಂಭಕ್ಕೆ ಸೂಚನೆ ನೀಡಿದ್ದರೂ, ಆ ಕೆಲಸಗಳನ್ನು ಪೂರ್ಣಗೊಳಿಸಲು ಸಮಯವೇ ಇಲ್ಲ. ಸಂತೆ ವೇಳೆಗೆ ಮೂರು ಮೊಳ ನೇಯ್ದರು ಎಂಬಂತೆ ಅಲ್ಲಲ್ಲಿ ಕೆಲಸ ಮಾಡಿದ್ದು ಬಿಟ್ಟರೆ ಪೂರ್ಣವಾಗಿ ಯಾವ ಕೆಲಸವೂ ನಡೆದಿಲ್ಲ.
ರಸ್ತೆಗಳ ಡಾಂಬರಿಗೆ ಹಿಂದೇಟು:
ಏರೋ ಇಂಡಿಯಾ ಹಿನ್ನೆಲೆಯಲ್ಲಿ ಸಿಟಿಯ ಪ್ರಮುಖ ರಸ್ತೆಗಳು, ಜಂಕ್ಷನ್‌ಗಳಲ್ಲಿ ಹೊಸದಾಗಿ ಡಾಂಬರು ಹಾಕಿ ಸೌಂದರ್ಯೀಕರಣ ಮಾಡುವುದು ಈವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ, ಈ ಬಾರಿ ರಸ್ತೆಗುಂಡಿ ಮುಚ್ಚಲಷ್ಟೇ ಉಸ್ತುವಾರಿ ಹೊತ್ತಿರುವ ಸಂಸ್ಥೆ ಗಮನ ಹರಿಸಿದೆ. ಬಳ್ಳಾರಿ ರಸ್ತೆಯಲ್ಲಿ ರಾಜಮಹಲ್ ಗುಟ್ಟಹಳ್ಳಿಯಲ್ಲಿ ಮಾತ್ರ ರಸ್ತೆಯ ಒಂದು ಬದಿ ಮಾತ್ರ ಎರಡು ದಿನದಿಂದ ರಾತ್ರಿ ವೇಳೆ ಡಾಂಬರು ಹಾಕಲಾಗುತ್ತಿದೆ. ಉಳಿದಂತೆ ಎಲ್ಲೂ ಟಾರ್ ಹಾಕುವುದು ಕಂಡುಬಂದಿಲ್ಲ. ಹೆಬ್ಬಾಳ ಮೇಲ್ಸೇತುವೆ ಮೇಲೆ ಕೆಲ ಗುಂಡಿಗಳು ಉಂಟಾಗಿದ್ದರೂ, ಅದನ್ನು ಮುಚ್ಚಿಲ್ಲ. ಕೆಲವೆಡೆ ಮಾತ್ರ ರಸ್ತೆಬದಿಯ ಫುಟ್‌ಪಾತ್ ಬಳಿ ಬಣ್ಣ ಹಚ್ಚಲಾಗಿದೆ.
ಮೇಳ ನಡೆಯುವ ಪ್ರದೇಶದಲ್ಲಿನ ಕೋಗಿಲು ರಸ್ತೆ, ಬಾಗಲೂರು ರಸ್ತೆ, ಏರ್‌ಪೋರ್ಟ್‌ನ ಪರ್ಯಾಯ ಮಾರ್ಗಗಳೆಂದು ಗುರುತಿಸಿರುವ ನಾಗವಾರ-ಥಣಿಸಂದ್ರ ರಸ್ತೆ, ಹೆಣ್ಣೂರು-ಬಾಗಲೂರು-ಮೈಲನಹಳ್ಳಿ ರಸ್ತೆಯಲ್ಲಿ ಕಿತ್ತುಬಂದಿರುವ ಮೇಲ್ದರವು ಹಾಗೆಯೇ ಉಳಿದಿದೆ. ಬಾಗಲೂರು ವೃತ್ತ ಸಮೀಪ 3 ಪಥದ ರಸ್ತೆಗೆ 2 ಪಥಕ್ಕಷ್ಟೇ ಡಾಂಬರು ಹಾಕಲಾಗಿದೆ. ಮೀಡಿಯನ್‌ಗಳಲ್ಲಿ ಕಳೆ ಸಸ್ಯ ತೆಗೆದಿಲ್ಲ. ಈ ರಸ್ತೆಗಳ ಹಾದಿಯುದ್ದಕ್ಕೂ ತ್ಯಾಜ್ಯದ ರಾಶಿ ಬಿದ್ದಿದ್ದರೂ, ಸ್ಥಳೀಯ ಗ್ರಾಪಂಗಳು ತೆರವು ಮಾಡುವು ಕೆಲಸ ಮಾಡಿಲ್ಲವೆಂದು ಸ್ಥಳೀಯರು ದೂರಿದ್ದಾರೆ.