

ಹುಬ್ಬಳ್ಳಿ: ನಗರದ ಹೊಸೂರ ಅನಸೂಯಾ ಮೆಳ್ಳಿಗೇರಿ ವಿಜ್ಞಾನ ಕೇಂದ್ರದಲ್ಲಿ ಏಕಸ್ ಫೌಂಡೇಷನ್ ವತಿಯಿಂದ ವಾರ್ಷಿಕ ವಿಜ್ಞಾನ ಮೇಳ ಹಾಗೂ ಮಾದರಿ ತಯಾರಿಕೆ ಸ್ಪರ್ಧೆ ಆವಿಷ್ಕಾರ್ 2024-25 ಕಾರ್ಯಕ್ರಮವು 3 ದಿನಗಳ ಕಾಲ ನಡೆಯಿತು.
ಹುಬ್ಬಳ್ಳಿ ಆವೃತ್ತಿಯ ಕಾರ್ಯಕ್ರಮವು ವಿದ್ಯಾರ್ಥಿಗಳು ವೈಜ್ಞಾನಿಕ ಸೃಜನಶೀಲತೆ ಪ್ರದರ್ಶಿಸಲು ಮತ್ತು ಸಮಾನ ಮನಸ್ಕ ಉತ್ಸಾಹಿಗಳೊಂದಿಗೆ ಸಂವಾದ ನಡೆಸಲು ವೇದಿಕೆಯಾಯಿತು.
31 ಶಾಲೆಗಳ 62 ವಿದ್ಯಾರ್ಥಿಗಳು ರಚಿಸಿದ 31 ನವೀನ ವಿಜ್ಞಾನ ಮಾದರಿಗಳು ಈ ಮೇಳದಲ್ಲಿ ಪ್ರದರ್ಶನಗೊಂಡವು. ಸ್ಪರ್ಧಾತ್ಮಕತೆ ಮತ್ತು ಸಹಕಾರಿ ವಾತಾವರಣ ಬೆಳೆಸುವ ಗುರಿ ಹೊಂದಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಸಹ ಆಯೋಜಿಸಲಾಗಿತ್ತು.
ವಿಜ್ಞಾನ ಮೇಳವು ಡಿಸೆಂಬರ್ 27 ಮತ್ತು ಜನವರಿ 21ರಂದು ಕ್ರಮವಾಗಿ ಕೊಪ್ಪಳ ಮತ್ತು ಬೆಳಗಾವಿಯಲ್ಲಿ ನಡೆಯಲಿದೆ.
ಉದ್ಘಾಟನೆ: ಆವಿಷ್ಕಾರ್ ಕಾರ್ಯಕ್ರಮ ಉದ್ಘಾಟಿಸಿದ ಏಕಸ್ ಅಧ್ಯಕ್ಷ ಮತ್ತು ಸಿಇಒ ಅರವಿಂದ ಮೆಳ್ಳಿಗೇರಿ ಅವರು, ಮಕ್ಕಳ ಕಲಿಕೆಯ ಅನುಭವಗಳಲ್ಲಿ ವಿಜ್ಞಾನ ಮತ್ತು ನಾವೀನ್ಯತೆಗಳನ್ನು ಸಂಯೋಜಿಸುವುದು ಮಹತ್ವದ ಅಂಶ. ಮಕ್ಕಳ ಆಟ ಮತ್ತು ಕಲಿಕೆಯಲ್ಲಿ ವಿಜ್ಞಾನ ಮತ್ತು ಅದರ ಅನ್ವಯಗಳನ್ನು ಅಳವಡಿಸುವುದು ಆರಂಭಿಕ ಬೆಳವಣಿಗೆಗೆ ಪ್ರಬಲ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಏಕಸ್ ಕಾರ್ಯಚಟುವಟಿಕೆಗಳು ಸರ್ಕಾರಿ ಶಾಲೆಗಳ ಶಿಕ್ಷಣ ಸುಧಾರಿಸಲು ಸಂಪೂರ್ಣ ನೆರವಾಗಿವೆ. 31 ಲಕ್ಷಕ್ಕಿಂತ ಹೆಚ್ಚಿನ ಕಲಿಕಾ ಸಾಮಗ್ರಿ ಕೊಡುಗೆ ನೀಡಲಾಗಿದೆ. ಫೌಂಡೇಷನ್ ಉಪಕ್ರಮಗಳು ಅಂಗನವಾಡಿ ಮಕ್ಕಳ ಬಾಲ್ಯದ ಕಾರ್ಯಕ್ರಮಗಳಿಂದ ಹಿಡಿದು ವಿದ್ಯಾರ್ಥಿಗಳಿಗೆ ವೃತ್ತಿ -ಕೇಂದ್ರಿತ ಬೆಂಬಲದವರೆಗೆ ವ್ಯಾಪಿಸಿದೆ ಎಂದು ಅವರು ತಿಳಿಸಿದರು.
ಏಕಸ್ ಫೌಂಡೇಷನ್ ಸಹ ಉಪಾಧ್ಯಕ್ಷ ಡಾ. ಪ್ರವಿಣಕುಮಾರ ನಾಯಕ ಮಾತನಾಡಿ, ಶಿಕ್ಷಕರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳು ಮತ್ತು ಬಿ.ಇಡಿ ಗಾಗಿ ಇತ್ತೀಚೆಗೆ ಆರಂಭಿಸಲಾದ ಉಪಕ್ರಮ ಸೇರಿದಂತೆ ಶಿಕ್ಷಕರ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಭವಿಷ್ಯದ ಶಿಕ್ಷಕರನ್ನು ರೂಪಿಸಲು ಕಾಲೇಜು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ.
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ ಮತ್ತು ಗಣಿತ ಶಿಕ್ಷಣ ಮುಂದುವರಿಸಲು ಫೌಂಡೇಷನ್ ಹೊಂದಿರುವ ಬದ್ಧತೆಯನ್ನು ಆವಿಷ್ಕಾರ್ ಕಾರ್ಯಕ್ರಮ ಒತ್ತಿ ಹೇಳುತ್ತದೆ ಎಂದರು.