

ಮಂಗಳೂರು: ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ-ಎಇಪಿಎಸ್ ಪಾವತಿ ಸಿಸ್ಟಂನಲ್ಲಿ ವಂಚನೆ ಮಾಡುವ ಸಾಧ್ಯತೆಗಳಿದ್ದು ಎಚ್ಚರವಾಗಿರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಎಇಪಿಎಸ್ ಎಂಬುದು ಬ್ಯಾಂಕ್ ತನ್ನ ಗ್ರಾಹಕರಿಗೆ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಂದ ಬಯೋಮೆಟ್ರಿಕ್ ಉಪಯೋಗಿಸಿ ಹಣವನ್ನು ವಿದ್‌ಡ್ರಾ ಮತ್ತು ರವಾನೆಯಂತಹ ಬ್ಯಾಂಕಿಂಗ್ ವಹಿವಾಟುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ವ್ಯವಸ್ಥೆಯಾಗಿದೆ. ಆಧಾರ್ ಕಾರ್ಡ್‌ದಾರರು ತಮ್ಮ ಆಧಾರ್ ಸಂಖ್ಯೆ ಮತ್ತು ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ವಹಿವಾಟು ನಡೆಸಬಹುದು. ಆದರೆ ಇದರಲ್ಲಿಯೂ ಇತರ ಪಾವತಿ ವ್ಯವಸ್ಥೆಗಳಂತೆ ವಂಚನೆಯಾಗುವ ಸಾಧ್ಯತೆ ಇರುತ್ತದೆ. ಸೈಬರ್ ವಂಚಕರು ಬಳಕೆದಾರರ ಆಧಾರ್ ದತ್ತಾಂಶಗಳನ್ನು ಸರ್ಕಾರಿ ವೆಬ್‌ಸೈಟ್‌ಗಳಿಂದ ಅಥವಾ ಇತರ ಮೂಲಗಳಿಂದ ಸಂಗ್ರಹಿಸಿ ಅದನ್ನು ಪಿಒಎಸ್/ಮೈಕ್ರೋ ಎಟಿಎಂ ಮೂಲಕ ಹಣ ವಿದ್‌ಡ್ರಾ ಅಥವಾ ವರ್ಗಾವಣೆ ಮಾಡುವ ಅಪಾಯವಿರುತ್ತದೆ.