

ನರೇಗಲ್ಲ: ಅದು ಸಾಮಾನ್ಯ ರೈತರ ಜಮೀನು. ಅಲ್ಪ ಭೂಮಿಯಲ್ಲಿ ಉತ್ತಿ-ಬಿತ್ತಿ ಏನಾದ್ಟರೂ ಬೆಳೆಯಬೇಕು ಎನ್ನುವ ಅಭಿಲಾಷೆಯಿಂದ ಭೂಮಿ ಉಳುಮೆ ಮಾಡಿದಷ್ಟೂ ಹೊಲದಲ್ಲಿ ಬಿಲ್ವ ಪತ್ರಿಯ ಸಸಿಗಳೇ ಬೆಳೆಯುತ್ತಿವೆ ಹೊರತು ಮತ್ತೇನೂ ಬೆಳೆಯುತ್ತಿಲ್ಲ!
ಇದು ಅಚ್ಚರಿ ಎನಿಸಿದರೂ ಸತ್ಯ!
ಸಮೀಪದ ನಿಡಗುಂದಿ ಗ್ರಾಮವು ತಪೋಭೂಮಿಯಾಗಿದ್ದು, ಶತಮಾನಗಳ ಹಿಂದೆ ಹಾನಗಲ್ಲ ಗುರು ಕುಮಾರ ಸ್ವಾಮೀಜಿಗಳು, ಹಾವೇರಿಯ ಶಿವಬಸವ ಶ್ರೀಗಳು ಇಲ್ಲಿ ತಪಸ್ಸು ಮಾಡಿದ್ದರು. ಮಹಾಮಹಿಮರು ತಪಗೈದ ಪುಣ್ಯ ಭೂಮಿಯಲ್ಲಿಂದು ಎಲ್ಲಿ ನೊಡಿದರಲ್ಲಿ ಬಿಲ್ವ ಪತ್ರಿಯ ಮರಗಳು ಬೆಳೆಯುತ್ತಿವೆ.
ನಿಡಗುಂದಿ ಗ್ರಾಮದ ಮಾತೋಶ್ರೀ ಶಾಂತವ್ವ ವೀರಪ್ಪ ಅಣಗೌಡ್ರ ಎಂಬುವರಿಗೆ ಸೇರಿದ 4 ಎಕರೆ 32 ಗುಂಟೆ ಜಮೀನು ಅದು. ಅದರಲ್ಲಿ 1.32 ಗುಂಟೆಯಷ್ಟು ಬಿಲ್ವ ಪತ್ರಿ ಮರಗಳು ಬೆಳೆಯುತ್ತಿವೆ. ಕುಟುಂಬದವರು ಭೂಮಿಯನ್ನು ಹಸನು ಮಾಡಿದಷ್ಟು ಮತ್ತೆ ಮತ್ತೆ ಪತ್ರಿಯ ಮರಗಳು ಬೆಳೆದು ನಿಲ್ಲುತ್ತಿವೆ. ವಿಪರ್ಯಾಸವೆಂದರೆ ಈ ಜಮೀನನ್ನು ಹೊಂದಿಕೊಂಡಿರುವ ಇತರೆ ಜಮೀನಿನಲ್ಲಿ ಈ ರೀತಿಯ ಬಿಲ್ವ ಪತ್ರಿಯ ಮರಗಳು ಬೆಳೆಯುತ್ತಿಲ್ಲ!
ಶತಮಾನಗಳ ಹಿಂದೆ ಹಾವೇರಿಯ ಶಿವಬಸವ ಶ್ರೀಗಳು ಈ ಜಮೀನಿನಲ್ಲಿ ತಪಸ್ಸು ಮಾಡಿದ್ದಾರೆ ಎನ್ನುವ ನಂಬಿಕೆ ಕುಟುಂಬದವರಲ್ಲಿದೆ. ಇಲ್ಲಿ ಮೂರು ದಳ ಹಾಗೂ ಐದು ದಳವುಳ್ಳ ಬಿಲ್ವ ಪತ್ರಿಗಳ ಮರಗಳು ಹೇರಳವಾಗಿ ಬೆಳೆಯುತ್ತಿವೆ ಎಂಬುದನ್ನು ಅರಿತು ಜಮೀನನ್ನು ಹಸನು ಮಾಡುವುದನ್ನೇ ಮಾಲೀಕರು ಕೈಬಿಟ್ಟರು. ವಿಚಿತ್ರ ಎಂಬಂತೆ ಜಮೀನನಲ್ಲಿರುವ ಬಾವಿ ಸೇರಿದಂತೆ ಜಮೀನಿನ ತುಂಬೆಲ್ಲ ಬಿಲ್ವ ಪತ್ರಿಯ ಮರಗಳು ಬೆಳೆದು ನಿಂತು ಧಾರ್ಮಿಕ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ.
ಹಾವೇರಿಯ ಶಿವಬಸವಶ್ರೀಗಳು ನಡೆದಾಡಿದ ನೆಲದಲ್ಲಿ, ಹಾನಗಲ್ಲ ಕುಮಾರೇಶ್ವರ ಶ್ರೀಗಳು, ನಿಡಗುಂದಿಕೊಪ್ಪದ ಲಿಂ. ಚನ್ನಬಸವ ಶ್ರೀಗಳು, ಲಿಂ. ಶಿವಬಸವ ಶ್ರೀಗಳು ನಡೆದಾಡಿರುವ ಕುರುಹುಗಳಿವೆ. ಹೀಗಾಗಿ ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಪೀಠಾಧಿಪತಿ ಅಭಿನವ ಶ್ರೀಚನ್ನಬಸವ ಶ್ರೀಗಳು ಮೌನ ಅನುಷ್ಠಾನದ ವ್ರತ ಮುಕ್ತಾಯ ಕಾರ್ಯವನ್ನು ಇದೇ ನೆಲದಲ್ಲಿ ನೆರವೇರಿಸಿದ್ದಾರೆ. ಇದರಿಂದ ಉತ್ತೇಜನಗೊಂಡ ಭಕ್ತರು ಬಿಲ್ವ ಪತ್ರಿಯ ವನದಲ್ಲಿ ಗುರುಕುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೂಲಕ ನಿರಂತರ ದಾಸೋಹ ನಡೆಸಲು ಅಣಿಯಾಗುತ್ತಿದ್ದಾರೆ.
ಇದೊಂದು ತಪೋಭೂಮಿಯಾಗಿದ್ದು ಜಮೀನಿನಲ್ಲಿ ಮೂರು ಹಾಗೂ ಐದು ದಳದ ಬಿಲ್ವ ಪತ್ರಿಗಳ ಮರಗಳು ಬೆಳೆಯುತ್ತಿರುವುದು ವಿಷೇಷವಾಗಿದೆ. ಇದು ಪುಣ್ಯದ ನೆಲವಾಗಿದ್ದರಿಂದ ಶ್ರೀಮಠಕ್ಕೆ ಬಿಟ್ಟು ಕೊಡಲಾಗಿದೆ. ಭಕ್ತರು, ಶ್ರೀಗಳ ಇಚ್ಛೆಯಂತೆ ಗುರುಕುಲ, ದಾಸೋಹ ಕೇಂದ್ರ ನಿರ್ಮಿಸುತ್ತಿರುವುದು ನಮಗೆ ಸಂತಸ ತಂದಿದೆ.ಶಾಂತವ್ವ ವೀರಪ್ಪ ಅಣಗೌಡ್ರ, ಬಸಪ್ಪ ವೀರಪ್ಪ ಅಣಗೌಡ್ರ ಜಮೀನಿನ ಮಾಲೀಕರು
1.32 ಗುಂಟೆ ಬಿಟ್ಟು ಬೆರೆ ಕಡೆಗಳಲ್ಲಿ ಬಿಲ್ವ ಪತ್ರಿಯ ಮರಗಳು ಬೆಳೆಯುತ್ತಿಲ್ಲ. ಇದೊಂದು ಅಚ್ಚರಿಯಾದರೂ ಪೂಜ್ಯರು ತಪಸ್ಸು ಮಾಡಿದ ಪುಣ್ಯದ ಬೀಡಾಗಿದೆ.ಅಂದಪ್ಪ ಬಿಚ್ಚೂರ, ಶರಣಯ್ಯ ಮಠಪತಿ, ಶಂಕ್ರಯ್ಯ ಹಿರೇಮಠ ಗ್ರಾಮಸ್ಥರು
ಹಾನಗಲ್ಲ ಗುರು ಕುಮಾರಸ್ವಾಮೀಜಿ, ಹಾವೇರಿಯ ಶಿವಬಸವ ಸ್ವಾಮೀಜಿಗಳು ನಿಡಗುಂದಿ ಗ್ರಾಮದಲ್ಲಿ ಕೆಲ ದಿನಗಳ ಕಾಲ ಪೂಜಾನುಷ್ಠಾನ ಕೈಗೊಂಡಿದ್ದರು ಎನ್ನುವುದರ ಬಗ್ಗೆ ಮಾಹಿತಿ ಇದೆ. ನಿಡಗುಂದಿ ಗ್ರಾಮದಿಂದ ಮುಂದೆ ನಿಡಗುಂದಿಕೊಪ್ಪ ಗ್ರಾಮಕ್ಕೆ ಬಂದು ಇಲ್ಲಿ ಶಾಖಾ ಶಿವಯೋಗ ಮಂದಿರವನ್ನು ಸ್ಥಾಪಿಸಿದ್ದಾರೆ. ಶ್ರೀಗಳು ತಪಗೈದ ಸ್ಥಳದಲ್ಲಿ ಬಿಲ್ವಪತ್ರಿಯ ಮರಗಳು ಬೆಳೆಯುತ್ತಿರುವ ಬಗ್ಗೆ ಭಕ್ತಾದಿಗಳು ನಮ್ಮ ಗಮನಕ್ಕೆ ತಂದಿದ್ದಾರೆ. ಭಕ್ತರ ಸಹಕಾರದಿಂದ ಆ ಜಮೀನಿನಲ್ಲಿ ಬಿಲ್ವಪತ್ರಿವನ, ಗುರುಕುಲ ಹಾಗೂ ದಾಸೋಹ ಕೇಂದ್ರ ನಿರ್ಮಿಸಲಾಗುತ್ತಿದೆ.ಅಭಿನವ ಶ್ರೀಚನ್ನಬಸವ ಸ್ವಾಮೀಜಿ, ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪ