

ಪ್ರಕಾಶ್ ಮಂಜೇಶ್ವರ ಮಂಗಳೂರು
ಸುಲಭ ಸಂಪರ್ಕ ಹಾಗೂ ಅಂತರ್ಜಲ ವೃದ್ಧಿ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿರುವ ಅಡ್ಯಾರ್ ಸೇತುವೆ ಅಣೆಕಟ್ಟು ಕಾಮಗಾರಿ ತಿಂಗಳಾಂತ್ಯಕ್ಕೆ ಪುನರಾರಂಭಗೊಳ್ಳಲಿದ್ದು, ಮಾರ್ಚ್‌ನಲ್ಲಿ ಸಾರ್ವಜನಿಕರ ಬಳಕೆಗೆ ಸಿದ್ಧಗೊಳಿಸಲು ಉದ್ದೇಶಿಸಲಾಗಿದೆ.
ಕಳೆದ ಮೇನಲ್ಲಿ ಕಾಣಿಸಿಕೊಂಡ ತೌಕ್ತೆ ಚಂಡಮಾರುತ ಸಂದರ್ಭ ಸೇತುವೆ ಕಾಮಗಾರಿ ಸ್ಥಗಿತಗೊಂಡಿತ್ತು. ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಇದ್ದು ಕಾಮಗಾರಿ ಆರಂಭಿಸುವ ಪರಿಸ್ಥಿತಿ ಇರಲಿಲ್ಲ. ಬಳಿಕ ಶೀಘ್ರಗತಿಯಲ್ಲಿ ಕಾಮಗಾರಿ ನಡೆದಿದ್ದು, ಭಾಗಶಃ ಮುಗಿದಿದೆ. ನಾಲ್ಕು ಪಿಲ್ಲರ್ ಹಾಗೂ ಕೆಲ ರಕ್ಷಣಾ ಕಾಮಗಾರಿ ಬಾಕಿ ಉಳಿದಿದೆ.
2017-18ನೇ ಸಾಲಿನಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮೂಲಕ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾದ ಬೃಹತ್ ಯೋಜನೆಗಳಲ್ಲಿ ಇದೂ ಒಂದು.
ಬಹುಕಾಲದ ಬೇಡಿಕೆ: ಆಸುಪಾಸಿನ ಗ್ರಾಮಗಳು ಹಾಗೂ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಮಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಯಾಣಿಸುವವರಿಗೆ ಸುಲಭ ಸಂಪರ್ಕ ಒದಗಿಸುವ ಉದ್ದೇಶದಿಂದ ಇಲ್ಲಿ ಸೇತುವೆ ನಿರ್ಮಾಣ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ. ಸಮುದ್ರದಿಂದ ಸುಮಾರು 12 ಕಿ.ಮೀ. ದೂರದಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಳ್ಳುತ್ತಿರುವ ಬಹುಪಯೋಗದ ಸೇತುವೆ ಅಣೆಕಟ್ಟಿನಿಂದ ಸಮುದ್ರದ ಉಪ್ಪು ನೀರು ಸೇತುವೆ ದಾಟುವುದು ತಪ್ಪಲಿದೆ. ಜತೆಗೆ ಪರಿಸರದ ಭೂಭಾಗಗಳಲ್ಲಿ ಜನರ ನಿತ್ಯ ಬಳಕೆ ಹಾಗೂ ಕೃಷಿ ಭೂಮಿಗೆ ಯಥೇಚ್ಛ ನೀರು ಲಭ್ಯತೆ ನಿರೀಕ್ಷಿಸಲಾಗಿದೆ.
ಪ್ರವಾಸಿಗರ ಆಕರ್ಷಣೆ: ಸೇತುವೆ ನಿರ್ಮಾಣದಿಂದ ಮುಡಿಪು, ಕೊಣಾಜೆ ಭಾಗದ ಜನರು ತೊಕ್ಕೊಟ್ಟು, ದೇರಳಕಟ್ಟೆ ಕಡೆ ಸಂಪರ್ಕ ಸಮೀಪವಾಗಲಿದೆ. ಬೋಟಿಂಗ್, ಮಕ್ಕಳ ಕ್ರೀಡಾ ಚಟುವಟಿಕೆಗೆ ಅವಕಾಶ ದೊರೆಯಲಿದೆ. ಹಸಿರು, ನದಿ ಹಾಗೂ ನಿಸರ್ಗದತ್ತ ಸೌಂದರ್ಯವಿರುವ ಈ ಪ್ರದೇಶವನ್ನು ಪ್ರವಾಸಿ ಸ್ಥಳವಾಗಿಯೂ ಅಭಿವೃದ್ಧಿಪಡಿಸಬಹುದು ಎನ್ನುತ್ತಾರೆ ಸ್ಥಳೀಯ ಶಾಸಕ ಯು.ಟಿ.ಖಾದರ್. ಇಕ್ಕೆಲಗಳಲ್ಲಿ ಪಾದಚಾರಿಗಳಿಗೆ ನಡೆಯಲು ತಲಾ ಒಂದು ಮೀಟರ್ ಸಹಿತ ಇಲ್ಲಿಯ ರಸ್ತೆ 9.5 ಮೀಟರ್ ಅಗಲವಿದೆ.
ನದಿಯಲ್ಲಿ ನೀರು ಅಧಿಕ ಇರುವುದು ಕಾಮಗಾರಿ ಆರಂಭಿಸಲು ಅಡ್ಡಿಯಾಗಿದೆ. ತಿಂಗಳಾಂತ್ಯಕ್ಕೆ ಕಾಮಗಾರಿ ಆರಂಭಿಸಿದರೆ ಮಾರ್ಚ್ ವೇಳೆಗೆ ಅಡ್ಯಾರ್ ಸೇತುವೆ ಅಣೆಕಟ್ಟು ಸಾರ್ವಜನಿಕರ ಬಳಕೆಗೆ ಲಭ್ಯವಾಗಬಹುದು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಗೋಕುಲ್‌ದಾಸ್, ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ