ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ನಾಳೆ

raghu akamanchi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವ ಹಾಲ್​ನಲ್ಲಿ ಸೆ. 4ರಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣ ಹಾಗೂ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ರಘು ಅಕಮಂಚಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿಕ್ಷಕರ ಅಭಿವೃದ್ಧಿಯಲ್ಲಿ ಯುಜಿಸಿ ಉಪಕ್ರಮ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ ಉದ್ಘಾಟಿಸುವರು. ಬೆಳಗಾವಿ ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹಾಗೂ ಸೊಲ್ಲಾಪುರ ಎಂಐಟಿ ವಿಶ್ವಪ್ರಯಾಗ ವಿವಿ ಸಂಸ್ಥಾಪಕ ಕುಲಪತಿ ಪ್ರೊ. ಗೋಪಾಲಕೃಷ್ಣ ಜೋಶಿ ವಿಷಯ ಮಂಡಿಸುವರು. ಬಳಿಕ 2022-23 ಹಾಗೂ 2023-24ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿಯನ್ನು ಕ್ರಮವಾಗಿ ಪ್ರೊ. ಮೋಹನ ಸಿದ್ದಾಂತಿ ಹಾಗೂ ಪ್ರೊ. ಎಸ್.ಬಿ. ಬೇವೂರ ಅವರಿಗೆ ವಿತರಿಸಲಾಗುವುದು ಎಂದರು.

ಉತ್ತಮ ಶಿಕ್ಷಕ ಪ್ರಶಸ್ತಿಗೆ ಹುಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಸುಧಾ ಕೌಜಗೇರಿ, ಹುಬ್ಬಳ್ಳಿ ಗ್ಲೋಬಲ್ ಕಾಲೇಜಿನ ಡಾ. ರಾಧಾ ರಾಮದುರ್ಗ, ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಮೇಶ ಸಂಕರಡ್ಡಿ, ಧಾರವಾಡ ಕರ್ನಾಟಕ ಕಾಲೇಜಿನ ಡಾ. ಪ್ರಶಾಂತ ಮಾಂಡ್ರೆ, ಉತ್ತಮ ಸಂಶೋಧಕ ಪ್ರಶಸ್ತಿಗೆ ಧಾರವಾಡ ಕವಿವಿಯ ಡಾ. ರವೀಂದ್ರ ಕಾಂಬಳೆ ಹಾಗೂ ಗದಗ ಜೆ.ಟಿ. ಕಾಲೇಜಿನ ಡಾ. ರಮೇಶ ಜಿ.ಕೆ. ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ಉತ್ತಮ ಆಡಳಿತಗಾರ ಪ್ರಶಸ್ತಿಗೆ ಧಾರವಾಡ ಸಿಎಸ್​ಟಿ ಕಾಲೇಜಿನ ಡಾ. ಕಮಲಾ ಢವಳೆ, ಹಾವೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಮಂಜುನಾಥ ಪಾಟೀಲ, ಉತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಕುಮಟಾ ಎ.ವಿ. ಬಾಳಿಗಾ ಕಾಲೇಜಿನ ಡಾ. ಶಿವಾನಂದ ಬುಳ್ಳಾ, ಅಂಕೋಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಸವಿತಾ ನಾಯಕ ಹಾಗೂ ಉತ್ತಮ ದೈಹಿಕ ಶಿಕ್ಷಣ ನಿರ್ದೇಶಕ ಪ್ರಶಸ್ತಿಗೆ ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಶ್ರೀಪಾಲ ಕುರಕುರೆ ಮತ್ತು ಧಾರವಾಡ ಶಿವಾಜಿ ಕಾಲೇಜಿನ ಎಸ್. ಧವನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net