ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ : ಶಾಸಕ ಡಾ.ಭರತ್ ಶೆಟ್ಟಿ ಸೂಚನೆ

New Project
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಬ್ರಹ್ಮಕಲಶೋತ್ಸವ ಸಂದರ್ಭ ದೇವಸ್ಥಾನಕ್ಕೆ ದಿನವೊಂದಕ್ಕೆ 20 ಸಾವಿರಕ್ಕೂ ಅಧಿಕ ಭಕ್ತರ ಆಗಮನ ನಿರೀಕ್ಷಿಸಲಾಗಿದೆ. ಭಕ್ತರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವೈದ್ಯಕೀಯ, ನೀರು, ಆಂಬುಲೆನ್ಸ್ ಸೇವೆ ಇರಬೇಕು. ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶ್ರೀ ಕ್ಷೇತ್ರ ಅದ್ಯಪಾಡಿ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಶಾಸಕ ಡಾ.ಭರತ್ ಶೆಟ್ಟಿ ಹೇಳಿದರ.

ಶ್ರೀ ಕ್ಷೇತ್ರ ಅದ್ಯಪಾಡಿಯಲ್ಲಿ ಮಾ.9ರಿಂದ 16ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಮಾ.27ರಿಂದ 24ರವರೆಗೆ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಆಯೋಜಿಸಲಾಗಿದ್ದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಏತಮೊಗರು ದೊಡ್ಡಮನೆ ಮಾತನಾಡಿ, ಆದಿನಾಥೇಶ್ವರನ ಕೃಪೆಯಿಂದ ನಮಗೆ ಈ ಭಾಗ್ಯ ಸಿಕ್ಕಿದ್ದು, ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಇಲ್ಲಿ ಯಾರಿಗೆ ಯಾರೂ ನಿರ್ದೇಶಕರಲ್ಲ. ಪ್ರತಿಯೊಬ್ಬರೂ ತಮಗೆ ನೀಡಿರುವ ಕೆಲಸ ಶ್ರದ್ಧೆಯಿಂದ ಮಾಡಿದರೆ ಸಾಕು. ಮೂರ‌್ನಾಲ್ಕು ದಿನದೊಳಗೆ ದೇವಸ್ಥಾನದ ಎಲ್ಲ ಅಭಿವೃದ್ಧಿ ಕೆಲಸ ಪೂರ್ಣಗೊಳ್ಳಲಿದೆ. ಅತ್ಯಂತ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.

ಕಂದಾವರ ಗ್ರಾಪಂ ಅಧ್ಯಕ್ಷೆ ಶಾಲಿನಿ ಎಸ್., ಪಿಡಿಒ ಸೌಮ್ಯಾ ಡಿ., ಕಾವೂರು ಮೆಸ್ಕಾಂ ಎಇಇ ಅಭಿಷೇಕ್ ಬಿ.ಎಸ್., ಬಜ್ಪೆ ಜೆ.ಇ. ದಿನೇಶ್, ಬಜ್ಪೆ ಆರೋಗ್ಯ ಕೇಂದ್ರದ ಪಿಎಚ್‌ಒ ಸಪ್ನಾ, ಎ.ಜೆ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಹನ್ ಕಾವ, ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿ ಪ್ರವೀಣ್, ಬಜ್ಪೆ ಠಾಣಾ ಪಿಎಸ್‌ಐ ರೇವಣ ಸಿದ್ದಪ್ಪ, ಹೆಡ್‌ಕಾನ್‌ಸ್ಟೆಬಲ್ ಸುಜನ್, ಆಶಾ ಕಾರ್ಯಕರ್ತೆ ಜೋಯ್ಸ ಮತ್ತಿತರರಿದ್ದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ವಸಂತ ಕೆ.ಕಜೆಪದವು ನಿರೂಪಿಸಿದರು.

ಪಾರ್ಕಿಂಗ್, ಪೊಲೀಸ್ ಸೇವೆ, ದಾರಿದೀಪ, ದಾರಿಯ ಹುಲ್ಲು ಕಟ್ಟಿಂಗ್ ಮಹತ್ವದ ವಿಷಯವಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ಸಹಕರಿಸಬೇಕು. ಪಂಚಾಯಿತಿಯಲ್ಲಿ ಹಣಕಾಸಿನ ಕೊರತೆ ಇದ್ದಲ್ಲಿ ಶಾಸಕನ ನಿಧಿಯಿಂದ ನೆರವು ನೀಡಲಾಗುವುದು. ಡಾ.ಭರತ್ ಶೆಟ್ಟಿ, ಶಾಸಕರು https://www.vijayavani.net/mangalore-kottari-kudru-gatti-kudru-illegal-sand-mining-protest https://www.vijayavani.net/somanatheshwar-temple-brahmakalashotsava

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net