ಅಡ್ಯನಡ್ಕ ಬ್ಯಾಂಕ್ ಕಳ್ಳತನದಲ್ಲಿ ಸ್ಥಳೀಯರ ಕೈವಾಡ ?

IMG-20240209-WA0048
Published on

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮ್ಯಾನೇಜರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಡಬ ನಿವಾಸಿಯಾದ ರಾಮಕೃಷ್ಣ ವಿ ಯು (೪೦) ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ನಡೆದ ಮಾಹಿತಿ ತಿಳಿದ ಗ್ರಾಹಕರು ಶುಕ್ರವಾರ ತಂಡೋಪ ತಂಡವಾಗಿ ಬ್ಯಾಂಕ್ ಗೆ ಆಗಮಿಸಿದ್ದು, ಯಾರೊಬ್ಬರನ್ನೂ ಒಳಗೆ ಬಿಟ್ಟಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಗ್ರಾಹಕರಿಗೆ ಇನ್ನಷ್ಟು ಅನುಮಾನವನ್ನು ಹುಟ್ಟು ಹಾಕುವಂತೆ ಮಾಡಿದೆ. ಠಾಣೆಗೆ ನೀಡಿದ ದೂರಿನಲ್ಲಿ ಬ್ಯಾಂಕಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳಲ್ಲಿ ಎಷ್ಟು ಪ್ರಮಾಣದ ಚಿನ್ನಾಭರಣಗಳು ಮತ್ತು ನಗದು ಹಣ ಕಳವಾಗಿರುತ್ತದೆ ಎಂಬುದನ್ನು ಪರಿಶೀಲನೆಯ ಬಳಿಕ ತಿಳಿಸುವುದಾಗಿ ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ರೀತಿಯಲ್ಲಿ ಯಾವುದೇ ಕಳ್ಳತನ ನಡೆದಿಲ್ಲ. ಬ್ಯಾಂಕ್ ಮುಚ್ಚುವ ಸಯದಲ್ಲಿದ್ದ ೧೭.೨೮ ಲಕ್ಷ ಮೊತ್ತವನ್ನು ಕಳ್ಳರು ಕದ್ದೊಯ್ದಿದ್ದಾರೆ. ಚಿನ್ನದ ಮೇಲೆ ನೀಡಲಾದ ಸಾಲದ ಲಾಕರ್ ನ ಚಿನ್ನವೆಲ್ಲವೂ ಸುರಕ್ಷಿತವಾಗಿದ್ದು, ವೈಯಕ್ತಿಕ ಲಾಕರ್ ನಲ್ಲಿ ೨ ಗ್ರಾಹಕರ ಲಾಕರ್ ಮಾತ್ರ ಕಳವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಕಳ್ಳರ ಕೈಚಳಕಕ್ಕೆ ಬಲಿಯಾದ ಬ್ಯಾಂಕ್ ಕಟ್ಟಡದಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಕೆಲಸಗಳು ನಡೆಯುತ್ತಿದ್ದು, ಸಾಯಂಕಾಲದ ಸಮಯ ಕ್ರೇನ್ ಬಳಸಿ ಹೊಸ ಲಾಕರ್ ಅನ್ನು ಬ್ಯಾಂಕ್ ನಲ್ಲಿ ಅಳವಡಿಸಲಾಯಿತು. ಈ ಎಲ್ಲಾ ಕೆಲಸ ಕಾರ್ಯಗಳು ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ. ಈ ಸಂದರ್ಭ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.

ಸ್ಥಳೀಯರ ಕೈವಾಡ?
ಕಳ್ಳತನವನ್ನು ನುರಿತ ತಂಡವೇ ಮಾಡಿರುವ ಸಾಧ್ಯತೆ ಹೆಚ್ಚೆಂಬ ಅಭಿಪ್ರಾಯಕ್ಕೆ ಪೊಲೀಸರು ಬಂದಿದ್ದಾರೆ. ಆದರೆ ಬ್ಯಾಂಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ಹಾಗೂ ಚಿನ್ನಾಭರಣ ಇರುವ ಮಾಹಿತಿಯನ್ನು ಈ ತಂಡಕ್ಕೆ ಸಳೀಯರು ನೀಡಿರಬಹುದಾ ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಿಟಕಿಯನ್ನು ತುಂಡರಿಸಿದ ರೀತಿ ಹೆಚ್ಚಿನ ಪುಷ್ಠಿಯನ್ನು ನೀಡುತ್ತದೆ. ಕಿಟಕಿಯನ್ನು ಮೊದಲೇ ತುಂಡರಿಸಿ ತಂಡಕ್ಕೆ ಮಾಹಿತಿ ನೀಡಿರುವ ಸಾಧ್ಯತೆಗಳಿದೆಯಾ? ಎರಡು ತಗಡುಗಳಿಂದ ಕೂಡಿದ ಸ್ಟ್ರಾಂಗ್ ರೂಮನ್ನು ತುಂಡರಿಸಿಸಲು ಕನಿಷ್ಠ ೩ ತಾಸು ಬೇಕಾಗಬಹುದೆಂಬ ಮಾಹಿತಿ ಪರಿಣತರಿಂದ ಕೇಳಿ ಬರುತ್ತಿದೆ. ಇಂತಹ ಕೃತ್ಯ ದಕ್ಷಿಣ ಕನ್ನಡದಲ್ಲಿ ಮೊದಲನೇ ಪ್ರಕರಣ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net