

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಸೆ. 22ರಂದು ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ನ ಪ್ರಥಮ ಸಮಾವೇಶ ಆಯೋಜಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆಗೆ ಗಾಂಧಿ ಭವನದಲ್ಲಿ ಸಮಾವೇಶ ನಡೆಯಲಿದೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಈ ಸಂಬಂಧ ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಶಿವಮೊಗ್ಗ, ಬಾಗಲಕೋಟ, ಇನ್ನಿತರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ವಕೀಲರನ್ನು ಸಂಘಟಿಸಲಾಗುತ್ತಿದೆ ಎಂದರು.
ಡಿಸೆಂಬರ್ (2023)ನಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ, ಈ ವಿಚಾರದಲ್ಲಿ ಕಾನೂನು ತಜ್ಞರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಕಾನೂನು ತಜ್ಞರ ಸಭೆ ನಡೆಸಿರುವ ಅಥವಾ ಮುಂದೆ ನಡೆಸುವ ಬಗ್ಗೆ ನಮಗೆ ಉತ್ತರ ಸಿಗಬೇಕಿದೆ. ಧರಣಿ ವೇಳೆ ಸರ್ಕಾರದಿಂದ ಈ ಕುರಿತು ಲಿಖಿತ ಉತ್ತರ ಬಯಸುತ್ತೇವೆ ಎಂದು ಹೇಳಿದರು.
ಡಿಸೆಂಬರ್ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಸರ್ಕಾರದ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು. ಹಿಂದಿನ ಅಧಿವೇಶನದಲ್ಲಿ ಮೀಸಲಾತಿ ಸಂಬಂಧ ಚರ್ಚೆ ನಡೆಸುವಂತೆ ನಮ್ಮ ಸಮಾಜದ 20 ಶಾಸಕರಿಗೆ ಮನವಿ ಮಾಡಲಾಗಿತ್ತು. ಅವರು ಈ ಕುರಿತು ಚರ್ಚೆಗೆ ಅವಕಾಶ ಕೋರಿ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದರು. ಆದರೆ, ವಿಧಾನಸಭಾಧ್ಯಕ್ಷರು ಅವಕಾಶ ನೀಡಿರಲಿಲ್ಲ. ಆ ಮೂಲಕ ಸರ್ಕಾರ ನಮ್ಮ ಧ್ವನಿ ಅಡಗಿಸುವ ಪ್ರಯತ್ನ ಮಾಡಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಶಂಕರಗೌಡ ನಾಗನಗೌಡರ, ಚಂದ್ರಶೇಖರ ನೇಗಿನಹಾಳ, ಜಿ.ಜಿ. ದ್ಯಾವನಗೌಡ್ರ, ಶಶಿಶೇಖರ ಡಂಗನವರ, ಪ್ರಕಾಶ ಭಾವಿಕಟ್ಟಿ, ಇತರರು ಇದ್ದರು.