ಅಶಕ್ತರ ಪರ ವಕೀಲರು ದನಿಯಾಗಬೇಕು

CTD 04 HCJ 1-O01
Published on

ಚಿತ್ರದುರ್ಗ: ಅಶಕ್ತರ ಪರ ಯಾರು ಬೇಕಾದರೂ ನಿಲ್ಲಬಹುದು. ಆದರೆ, ಸಮಾಜದಲ್ಲಿರುವ ಅಶಕ್ತರ ದನಿಯಾಗಿ ನಿಲ್ಲುವ ಕೆಲಸ ವಕೀಲರಿಂದ ಆಗಬೇಕು. ಈ ಮೂಲಕ ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುನಿಲ್‌ದತ್ ಯಾದವ್ ಸಲಹೆ ನೀಡಿದರು.

ಹೈಕೋರ್ಟ್‌ಗೆ ನೂತನವಾಗಿ ನೇಮಕಗೊಂಡ ನ್ಯಾಯಮೂರ್ತಿಗಳಿಗೆ ಹಾಗೂ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದವರಿಗೆ ವಕೀಲರ ಜಿಲ್ಲಾ ಸಂಘದಿಂದ ಶನಿವಾರ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೊಂದವರ ಕಣ್ಣೀರು ಒರೆಸುವ ಶಕ್ತಿ ವಕೀಲ ವೃತ್ತಿಗಿದೆ. ತಮ್ಮ ಹಕ್ಕುಗಳಿಗಾಗಿ ಅನೇಕರು ಹೋರಾಟ ನಡೆಸುತ್ತಲೇ ಇದ್ದಾರೆ. ಹೀಗಾಗಿ ಕಾನೂನಾತ್ಮಕವಾಗಿ ಅವರ ಸಮಸ್ಯೆ ಬಗೆಹರಿಸಲು ಮುಂದಾಗಿ. ಇಂತಹ ಅವಕಾಶ ಎಲ್ಲರಿಗೂ ದೊರೆಯದು ಎಂದರು.

ನ್ಯಾಯಮೂರ್ತಿಗಳು, ನ್ಯಾಯಾಧೀಶರು ಚಿತ್ರದುರ್ಗ ಸೇರಿ ಯಾವುದೇ ಊರಿನವರಾಗಿರಲಿ, ಅವರನ್ನು ಆ ಪ್ರದೇಶ, ವರ್ಗಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ಕಾರಣ ಎಲ್ಲರನ್ನೂ ಸಮನಾಗಿ ಕಾಣಬೇಕಿದೆ. ಅಲ್ಲದೆ, ನ್ಯಾಯಾಂಗ ವ್ಯವಸ್ಥೆ ಘನತೆ ಎತ್ತಿ ಹಿಡಿಯುವ ಬಹುದೊಡ್ಡ ಜವಾಬ್ದಾರಿ ಇದ್ದು, ಅದಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಬೇಕಿದೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಇರುವವರು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಿ.ಬಸವರಾಜ್, ರಾಮಚಂದ್ರ ಡಿ.ಹುದ್ದಾರ್, ಟಿ.ವೆಂಕಟೇಶ್ ನಾಯ್ಕ, ಬೆಳಗಾವಿ ಮತ್ತು ಬೆಂಗಳೂರಿನ ಜಿಲ್ಲಾ ನ್ಯಾಯಾಧೀಶರಾದ ಎನ್.ಆರ್.ಮಧು, ಇ.ಎಸ್.ಈರಣ್ಣ ಅವರನ್ನು ಗೌರವಿಸಲಾಯಿತು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಆರ್.ರಾಜಣ್ಣ, ಎಸ್.ಎಫ್.ಗೌತಮ್ ಚಂದ್, ಎಂ.ದೇವರಾಜ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಶಿವುಯಾದವ್, ಉಪಾಧ್ಯಕ್ಷ ಜಿ.ಸಿ.ದಯಾನಂದ, ಪ್ರಧಾನ ಕಾರ್ಯದರ್ಶಿ ಎಂ. ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net