ವಕೀಲರಿಂದ ಸಮಾಜಮುಖಿ ಕಾರ್ಯ ಶ್ಲಾಘನೀಯ

4mnv03
Published on

ಮಾನ್ವಿ: ವಕೀಲರ ಸಂಘದಿಂದ ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಶಿವರಾಜ ವಿ.ಸಿದ್ದೇಶ್ವರ ಹೇಳಿದರು.

ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ವಕೀಲರ ದಿನಾಚರಣೆ ಹಿನ್ನೆಲೆಯಲ್ಲಿ ಕ್ರೀಡಾಕೂಟ ಆಯೋಜನೆಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಸಿವಿಲ್ ನ್ಯಾಯಾಧೀಶ ಆಶಪ್ಪ ಬಿ.ಸಣ್ಣಮನಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ವಕೀಲರ ಸಂಘ ಮತ್ತು ಇತರ ಸಂಘ-ಸಂಸ್ಥೆಗಳು ರಕ್ತದಾನ ಶಿಬಿರ ಹಮ್ಮಿಕೊಂಡು ಅಪಘಾತ, ಹೆರಿಗೆ ಹಾಗೂ ಇತರ ತುರ್ತು ಸಂದರ್ಭದಲ್ಲಿ ಇನ್ನೊಬ್ಬರ ಜೀವ ಉಳಿಸಲು ಮುಂದಾಗುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್ ಹಾಗೂ ಇತರ ವಕೀಲರು ರಕ್ತದಾನ ಮಾಡಿದರು. ವೈದ್ಯರಾದ ಶಿರಾಪಿ, ರಾಜಶ್ರೀ, ಐಶಾ, ವಕೀಲರ ಸಂಘದ ಉಪಾಧ್ಯಕ್ಷ ಮನೋಹರ ವಿಶ್ವಕರ್ಮ, ವಕೀಲರಾದ ಕೊರವಯ್ಯ ನಾಯಕ, ಚನ್ನಬಸವ ನಾಯಕ, ಶರಣಬಸವ ಹರವಿ, ಶಿವರಾಜ ನಾಯಕ, ಲಕ್ಷ್ಮೀದೇವಿ ನಾಯಕ, ದತ್ತಾತ್ರೇಯ, ಮಲ್ಲೇಶ ಮಾಚನೂರು, ಈಶಪ್ಪ ಬೈಲಮಾರ್ಚೆಡ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net