ವಕಾಲತ್ತಿಗೆ ಸಹಿ ಪಡೆದ ವಕೀಲರು

28BGV_RAVIG3-Web
ಬೆಂಗಳೂರಿನ ಮೂವರು ವಕೀಲರು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಶುಕ್ರವಾರ ಭೇಟಿ ನೀಡಿದರು.
Published on

ಬೆಳಗಾವಿ: ಹುಬ್ಬಳ್ಳಿಯ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮೂವರು ವಕೀಲರ ತಂಡವು, ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಬಂಧಿಯಾಗಿರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಶುಕ್ರವಾರ ಭೇಟಿಯಾಗಿ ವಕಾಲತು ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದಾರೆ.

ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬೆಳಗ್ಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಹಿರಿಯ ವಕೀಲ ಪ್ರಸನ್ನ ಆರ್., ಮೈತ್ರಾಯಿ ಕೃಷ್ಣನ್ ಹಾಗೂ ಚೌಕ್ಸಿ ಎಂಬುವರು ಆಗಮಿಸಿದರು. ಬಂಧಿಯಾಗಿರುವ ವಿದ್ಯಾರ್ಥಿಗಳಾದ ಕಾಶ್ಮೀರದ ಬಾರಾಮುಲ್ಲಾದ ಬಾಸಿತ್ ಸೋಫಿ, ತಾಲೀಬ ಮಜೀದ್ ಹಾಗೂ ಅಮೀರ್ ಮೊಯಿನುದ್ದೀನ್ ವಾನಿ ಇವರನ್ನು ಭೇಟಿ ಮಾಡಿದರು. ಸುಮಾರು 45 ನಿಮಿಷಗಳ ಕಾಲ ಘಟನೆಗೆ ಸಂಬಂಧಿಸಿ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು. ಅಲ್ಲದೆ, ವಕಾಲತು ಅರ್ಜಿಗೆ ಆ ವಿದ್ಯಾರ್ಥಿಗಳಿಂದ ಸಹಿ ಪಡೆದುಕೊಂಡರು.

ಬಳಿಕ ಕಾರಾಗೃಹದಿಂದ ಹೊರಬಂದ ವಕೀಲರ ತಂಡ, ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿ ಧಾರವಾಡಕ್ಕೆ ತೆರಳಿದರು.
ಫೆ. 24ರಂದು ಧಾರವಾಡಕ್ಕೆ ಆಗಮಿಸಿದ್ದ ಇದೇ ವಕೀಲರ ವಿರುದ್ಧ ಧಾರವಾಡ ವಕೀಲರ ಸಂಘ ಅಸಮಾಧಾನ ವ್ಯಕ್ತಪಡಿಸಿತ್ತು. ಬೆಂಗಳೂರು ವಕೀಲರ ವಿರುದ್ಧ ಘೋಷಣೆ ಕೂಗಿ ಕಾರಿನ ಮೇಲೆ ಕಲ್ಲು ತೂರಾಟವೂ ನಡೆದಿತ್ತು. ನಂತರ ಆರೋಪಿ ಪರ ವಕೀಲರು ಬೆಂಗಳೂರು ಹೈಕೋರ್ಟ್ ಮೊರೆ ಹೋಗಿದ್ದರಿಂದ ವಿರೋಧ ಮಾಡದಂತೆ ಧಾರವಾಡ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net