

ಹುಬ್ಬಳ್ಳಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಆತ್ಮವಿಶ್ವಾಸ ತೋರಬೇಕು ಎಂದು ಜ್ಯೋತಿ ಪ್ರಲ್ಹಾದ ಜೋಶಿ ಹೇಳಿದರು.
ಗ್ರಾಮ ವಿಕಾಸ ಸೊಸೈಟಿ ಅನುಷ್ಠಾನಗೊಳಿಸುತ್ತಿರುವ ಉಚಿತ ವೃತ್ತಿಪರ ತರಬೇತಿ ಮೂಲಕ ವಿವಿಧ ಕಂಪನಿಗಳ ಸಹಯೋಗದೊಂದಿಗೆ ನಗರದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ, ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ದುಡಿಯುವಂತಾಗಬೇಕು. ದುಡಿದು ಬದುಕಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಇದರಿಂದ ಆತ್ಮಾಭಿಮಾನ ಮತ್ತು ಆತ್ಮಸ್ಥೈರ್ಯ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮ ವಿಕಾಸ ಸೊಸೈಟಿ ಸಿಇಒ ಜಗದೀಶ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, 2300 ಹೊಲಿಗೆ ಯಂತ್ರಗಳನ್ನು ಪ್ರಮಾಣ ಪತ್ರದೊಂದಿಗೆ ವಿತರಿಸಲಾಗಿದೆ. ಇದುವರೆಗೆ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ 11,040 ಮಹಿಳೆಯರಿಗೆ ತರಬೇತಿ ನೀಡಿದ್ದು, ಅದರಲ್ಲಿ 5ರಿಂದ 6 ಸಾವಿರ ಮಹಿಳೆಯರಿಗೆ ಜಾಬ್ ಆಫರ್ ನೀಡಲಾಗಿದೆ. ಈ ತರಬೇತಿಯಲ್ಲಿ ಮಹಿಳೆಯರು ತಯಾರಿಸಿದ ಸಿದ್ದ ಉಡುಪಗಳನ್ನು ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂದರು.
ಅಶ್ವಿನಿ ಅಲಾಟಗಿ ಮಾತನಾಡಿದರು. ಮುಕ್ತಾ ಯಡೆಹಳ್ಳಿ, ಪ್ರಿಯಾ, ಶ್ವೇತಾ ಹಕಪಕ್ಕಿ, ಅಸ್ಮಿತಾ ಕರ್ಕಣ್ಣವರ ಇತರರು ಇದ್ದರು.