

ಹುಬ್ಬಳ್ಳಿ: ಮಹಿಳೆಯರು ಉದ್ಯಮ ಆರಂಭಿಸಬೇಕು. ಉದ್ಯೋಗ ಕೇಳುವುದಕ್ಕಿಂತ ಉದ್ಯೋಗದಾತರಾಗಬೇಕು. ಇಂಥ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿವಳಿಕೆ ನೀಡಿದರು.
ಇಲ್ಲಿನ ಕುಸಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಗ್ರಾಮ ವಿಕಾಸ ಫೌಂಡೇಷನ್ ಹಾಗೂ ಇತರ ಕಂಪನಿಗಳ ಸಿಎಸ್‌ಆರ್ ಅನುದಾನದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡ ಪ್ರಮಾಣದಲ್ಲಿ ಭಾರತ ಬಟ್ಟೆಗಳನ್ನು ಉತ್ಪಾದನೆ ಮಾಡಿ ವಿದೇಶಗಳಿಗೆ ರಪ್ತು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಹೊಲಿಗೆ ಕಲಿತ ಮಹಿಳೆಯರಿಗೆ ದೊಡ್ಡ ಅವಕಾಶ ಸಿಗಲಿದೆ. ಬಟ್ಟೆ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿಯೇ 4ನೇ ಸ್ಥಾನದಲ್ಲಿದೆ. ಮುಂಬರುವ ದಿನಗಳಲ್ಲಿ 2-3ನೇ ಸ್ಥಾನಕ್ಕೆ ಬರಲಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಯಿಂದ ಗಾರ್ಮೆಂಟ್‌ನಲ್ಲಿ ದೊಡ್ಡ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹೊಲಿಗೆಗೆ ಬೇಕಾದ ಮೂಲ ತರಬೇತಿ ನಾವು ನೀಡುತ್ತೇವೆ. ಹೆಚ್ಚಿನ ತರಬೇತಿ ನೀವು ಪಡೆಯಬೇಕು ಎಂದರು.
ಧಾರವಾಡಕ್ಕೆ 2-3 ಗಾರ್ಮೆಂಟ್ ಕಂಪನಿಗಳು ಬರಲು ಉತ್ಸುಕತೆ ತೋರಿವೆ. ನೀವು ಸಹ ಗಾರ್ಮೆಂಟ್ ಕಂಪನಿ ಮಾಲೀಕರಾಗಲು ಮುಂದಾಗಬೇಕು. ಅದಕ್ಕೆ ಪರಿಶ್ರಮ ಮತ್ತು ಕೌಶಲ ಅಗತ್ಯ. ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆದು, ನೀವೇ ಉದ್ಯೋಗದಾತರಾಗಬೇಕು ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆಯರು ಇಂದು ಸ್ವಾವಲಂಬಿಗಳಾಗಿದ್ದಾರೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮೊದಲ ಹಂತದಲ್ಲಿ 2004 ಹೊಲಿಗೆ ಯಂತ್ರ ವಿತರಿಸಿ, ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದಾರೆ ಎಂದರು.
ಕಂಪ್ಯೂಟರ್ ಕಲಿಕೆಗೆ ಒತ್ತು ನೀಡಬೇಕು ಎನ್ನುವ ಬೇಡಿಕೆ ಕೇಳಿಬರುತ್ತಿದೆ. ಸಚಿವರ ಜತೆ ಸೇರಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಮಹಿಳೆಯರಿಗೆ ಕಂಪ್ಯೂಟರ್ ಕಲಿಕೆ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು. ಅಲ್ಲದೇ ನನ್ನ ಕ್ಷೇತ್ರದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆ ಸಚಿವರ ಬಳಿ ಮನವಿ ಮಾಡಿರುವುದಾಗಿ ತಿಳಿಸಿದರು. ಹೊಲಿಗೆ ಯಂತ್ರ ತರಬೇತಿ ಪಡೆದ ಮಹಿಳೆಯರು ಅನಿಸಿಕೆ ಹಂಚಿಕೊಂಡರು. ತರಬೇತಿ ಅವಧಿಯಲ್ಲಿ ಮಹಿಳೆಯರು ಸಿದ್ಧಪಡಿಸಿದ ಅಂಗನವಾಡಿ ಮಕ್ಕಳ ಬಟ್ಟೆಯನ್ನು ಪ್ರದರ್ಶಿಸಿದರು.
ಜ್ಯೋತಿ ಜೋಶಿ, ಗ್ರಾಮ ವಿಕಾಸ ಫೌಂಡೇಷನ್‌ನ ಸಂಯೋಜಕ ಜಗದೀಶ ನಾಯಕ, ಇತರರಿದ್ದರು.