ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಲು ಸಲಹೆ

19kkr-1(5-24
ಕಿಕ್ಕೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಭಾನುವಾರ ರಸ್ತೆ ಸುರಕ್ಷತಾ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಯಿತು. ಇನ್‌ಸ್ಪೆಕ್ಟರ್ ರೇವತಿ, ಕೇಶವಪ್ರಸಾದ್, ವಿನೋದ್, ಅರುಣಕುಮಾರ್, ಕಾಯಿ ಮಂಜೇಗೌಡ ಮತ್ತಿತರರಿದ್ದರು.
Published on

ಕಿಕ್ಕೇರಿ: ಜೀವರಕ್ಷಕದಂತಿರುವ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ಅಪಘಾತ ಸಂದರ್ಭ ವೇಳೆ ಜೀವ ಉಳಿಸಿಕೊಳ್ಳಬಹುದು ಎಂದು ಇನ್‌ಸ್ಪೆಕ್ಟರ್ ರೇವತಿ ತಿಳಿಸಿದರು.

ಇಲ್ಲಿನ ಹಳೇ ಬಸ್‌ನಿಲ್ದಾಣದಲ್ಲಿ ಭಾನುವಾರ ರಸ್ತೆ ಸುರಕ್ಷತಾ ನಿಯಮ ಕುರಿತು ಜಾಗೃತಿ ಮೂಡಿಸಿ ಮಾತನಾಡಿದ ಅವರು, ಬಹುತೇಕ ಸಾವು ನೋವು ಸಂಭವಿಸುವುದು ಹೆಲ್ಮೆಟ್ ಇಲ್ಲದಿರುವುದರಿಂದ. ಅಪಘಾತವಾದಾಗ ಮೊದಲು ತಲೆಗೆ ಪೆಟ್ಟಾಗಿ ಸಾವಿನ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಹೆಲ್ಮೆಟ್ ಜೀವಕ್ಕೆ ರಕ್ಷಾಕವಚವಿದ್ದಂತೆ. ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ನಿಯಮ ಪಾಲಿಸುವುದು ಒಳಿತು ಎಂದರು.

ವಾಹನಗಳಿಗೆ ವಿಮೆ ಮಾಡಿಸುವುದು ಒಳಿತು. ತೊಂದರೆಯಾದಾಗ ಇಡೀ ಕುಟುಂಬ ಬೀದಿಗೆ ಬೀಳಲಿದೆ. ವಿಮೆ ಆಪತ್ತಿನ ಸಂದರ್ಭದಲ್ಲಿ ರಕ್ಷಕವಾಗಿದ್ದು, ಡಿಎಲ್, ಎಫ್‌ಸಿ ಇಲ್ಲದೆ ವಾಹನಗಳನ್ನು ಹೊರಗೆ ತೆಗೆಯಬಾರದು ಎಂದರು.

ಅಪ್ರಾಪ್ತರು ವಾಹನ ಚಲಾಯಿಸಿದರೆ ಪಾಲಕರಿಗೆ ದಂಡ ಬೀಳಲಿದೆ. 9ವರ್ಷ ತುಂಬಿದ ಮಕ್ಕಳಿಗೆ ಹೆಲ್ಮೆಟ್ ಹಾಕಿಸುವುದು ಕಡ್ಡಾಯ. ಅಪಘಾತ ಸಮಯದಲ್ಲಿ ಹಿಂಬದಿ ಸವಾರನಿಗೆ ಸಾವು ನೋವು ಸಂಭವಿಸಿದರೆ ಚಾಲಕನೇ ಹೊಣೆ ಎಂಬ ನಿಯಮವಿದೆ. ಅರಿಯದೆ ಮಾಡಿದ ತಪ್ಪಿಗೆ ಕ್ಷಮೆ ಇರಲಾರದು. ಕಾರು ಮತ್ತಿತರ ವಾಹನ ಚಲಾವಣೆ ವೇಳೆ ಸೀಟ್ ಬೆಲ್ಟ್ ಧರಿಸಬೇಕು. ಅಡ್ಡದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದು, ಕರ್ಕಶ ಶಬ್ದ, ವ್ಹೀಲಿಂಗ್ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದ ಚಾಲಕರಿಗೆ ಪುಷ್ಪಗುಚ್ಛ ನೀಡಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ತಿಳಿ ಹೇಳಿದರು.
ಪಿಎಸ್‌ಐ ಕೇಶವಪ್ರಸಾದ್, ಸಿಬ್ಬಂದಿ ವಿನೋದ್, ಕುಮಾರ್, ಸುನಿಲ್, ಲಕ್ಷ್ಮಣ್, ಮುಖಂಡರಾದ ಕೆ.ವಿ. ಅರುಣಕುಮಾರ್, ಕಾಯಿ ಮಂಜೇಗೌಡ, ಜೇಟುಸಿಂಗ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net