

ಹುಬ್ಬಳ್ಳಿ: ಉಳ್ಳವರು ದಾನ ಮಾಡುವ ಮೂಲಕ ಸರ್ಕಾರಿ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಿ ಬಡವರ ಪಾಲಿಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂದು ಮಣಕವಾಡದ ಶ್ರೀಗುರು ಅನ್ನದಾನೇಶ್ವರ ಮಹಾಂತಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ದಿ. ಶ್ರೀಮತಿ ರೇಷ್ಮಿ ದೇವಿ ಸೋಹನಲಾಲ ಕೊಠಾರಿ ಅವರ ಸ್ಮರಣಾರ್ಥ ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ನೂತನವಾಗಿ ಉನ್ನತದರ್ಜೆಗೇರಿಸಿರುವ ಕೊಠಾರಿ ಮಾನವ ಸೇವಾ ಕೇಂದ್ರ ಸುಧಾರಿತ ಮಕ್ಕಳ ತೀವ್ರ ನಿಗಾ ಘಟಕ (ಪಿಡಿಯಾಟ್ರಿಕ್ ಐಸಿಯು) ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಭಾನುವಾರ ಮಾತನಾಡಿದರು.
ಬಂಗಾರ ಧರಿಸಿದವರು, ದೊಡ್ಡ ಮನೆ, ಆಸ್ತಿಯುಳ್ಳವರು ದೊಡ್ಡವರಲ್ಲ. ಜಗತ್ತಿನಲ್ಲಿ ಕೆಳಗೆ ಬಿದ್ದವರನ್ನು ಮೇಲೆ ಎತ್ತುವವರು ದೊಡ್ಡವರಾಗುತ್ತಾರೆ. ಇಂತಹ ಅಪರೂಪದ ಸಾಲಿಗೆ ಸೋಹನಲಾಲ್ ಕೊಠಾರಿ ಅವರು ಸೇರುತ್ತಾರೆ. ಭಗವಂತ ನೇರವಾಗಿ ತನ್ನಿಂದ ಮಾಡಲು ಆಗದ ಕೆಲಸವನ್ನು ಮಾನವ ರೂಪದ ನಮಗೆ ಮಾಡಲು ಭೂಮಿ ಮೇಲೆ ಜನ್ಮ ತಾಳಿಸಿದ್ದಾನೆ. ಹೀಗಾಗಿ ಪ್ರತಿಯೊಬ್ಬರೂ ಒಳ್ಳೆಯ ಕಾರ್ಯ ಮಾಡಬೇಕು ಎಂದರು.
ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಮಾತನಾಡಿ, ಮಕ್ಕಳ ಆರೋಗ್ಯ, ಕಿರಿಯ ಸದಸ್ಯರ ಯೋಗಕ್ಷೇಮಕ್ಕಾಗಿ ಅರೋಗ್ಯ ಸೌಲಭ್ಯ ಮತ್ತು ಸೇವೆಗಳನ್ನು ಹೆಚ್ಚಿಸುವಲ್ಲಿ ಕೊಠಾರಿ ಮಾನವ ಸೇವಾ ಕೇಂದ್ರವು ಪ್ರೋತ್ಸಾಹದಾಯಕವಾಗಿದೆ. ಕಡಿಮೆ ಸಮಯದಲ್ಲಿ ಇಂತಹ ಕೇಂದ್ರ ನಿರ್ಮಾಣ ಮಾಡಿಕೊಟ್ಟ ಕೊಠಾರಿ ಕುಟುಂಬಕ್ಕೆ ಕಿಮ್ಸ್ ಅಭಾರಿಯಾಗಿದೆ. ಹೆಚ್ಚಿನ ದಾನಿಗಳು ಇಂತಹ ಕಾರ್ಯಕ್ಕೆ ಮುಂದಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಇದೊಂದು ಉತ್ತಮ ಕಾರ್ಯ. ಮೂರು ತಿಂಗಳ ಅವಧಿಯಲ್ಲಿ ಇಂತಹ ಕಾರ್ಯ ಮಾಡಿ ಕೊಟ್ಟಿದ್ದಕ್ಕೆ ಕಿಮ್ಸ್ ಪರ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಕೊಠಾರಿ ಮಾನವ ಸೇವಾ ಕೇಂದ್ರ ನಿರ್ಮಾಣ ಮಾಡಿದ ಸೋಹನಲಾಲ್ ಕೊಠಾರಿ ಅವರು ಮಾತನಾಡಿ, ಹುಬ್ಬಳ್ಳಿ ಜನ ನನ್ನ ಕೈ ಹಿಡಿದು ಬೆಳೆಸಿದ್ದಾರೆ. ಅವರ ಋಣ ನನ್ನ ಮೇಲಿದೆ. ಜನರ ಸೇವೆ ಮಾಡಬೇಕೆಂಬ ನಿಟ್ಟಿನಲ್ಲಿ ಈ ಕೇಂದ್ರ ನಿರ್ಮಾಣ ಮಾಡಲಾಗಿದೆ ಎಂದರು.
ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ. ಅವರು ಸಚಿವ ಸಂತೋಷ ಲಾಡ್ ಕಳುಹಿಸಿದ್ದ ಸಂದೇಶವನ್ನು ಓದಿದರು.
ಆಲ್ ಇಂಡಿಯಾ ಜೈನ್ ಯೂಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಧಾರವಾಡ ಡಿಎಚ್‌ಒ ಡಾ. ಶಶಿ ಪಾಟೀಲ, ಸಿಎಒ ಶಿವಾನಂದ ಭಜಂತ್ರಿ, ಡಾ. ವಿನೋದ ರಟಗೇರಿ, ಡಾ. ಪ್ರಕಾಶ ವಾರಿ, ನರೇಶಲಾಲ್ ಕೊಠಾರಿ, ಸುರೇಶಕುಮಾರ ಕೊಠಾರಿ, ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಇತರರು ಇದ್ದರು.