ಗುರಿ ಸಾಧಿಸುವವರೆಗೆ ವಿರಮಿಸದಿರಲು ಸಲಹೆ

h12-IEMS
Published on

ಹುಬ್ಬಳ್ಳಿ: ಕರ್ನಾಟಕ ವಿಶ್ವ ವಿದ್ಯಾನಿಲಯ ಕಾಲೇಜ್ ಶಿಕ್ಷಕರ ಸಂಘ ಮತ್ತು ದೇಶಪಾಂಡೆ ಸ್ಟಾರ್ಟ್‌ಅಪ್‌ಗಳ ಸಹಯೋಗದೊಂದಿಗೆ
ನಗರದ ಇನ್‌ಸ್ಟಿಟ್ಯೂಟ್ ಆಫ್ ಎಕ್ಸ್‌ಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ಕ್ಯಾಂಪಸ್‌ನಲ್ಲಿ ಒಂದು ದಿನದ ಉತ್ತರ ಕರ್ನಾಟಕ ಕರಿಯರ್ ಕಾನ್‌ಕ್ಲೇವ್ ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಉದ್ಘಾಟಿಸಿ ಮಾತನಾಡಿ, ಸರಿಯಾದ ಸಮಯದಲ್ಲಿ ಕದ ತಟ್ಟುವವರಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ಶ್ರಮಕ್ಕೆ ಪರ್ಯಾಯವಿಲ್ಲ. ಗುರಿ ಸಾಧಿಸುವವರೆಗೆ ವಿರಮಿಸಬಾರದು ಎಂದು ಸಲಹೆ ನೀಡಿದರು.
ಕರ್ನಾಟಕ ವಿಶ್ವವಿದ್ಯಾನಿಲಯ ಕಾಲೇಜ್ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಮಂಜುನಾಥ ತಲ್ಲೂರು ಮಾತನಾಡಿ, ಜ್ಞಾನ ಮತ್ತು ಸಾಮಾನ್ಯ ಜ್ಞಾನ ಎರಡೂ ಉತ್ತಮ ಸ್ನೇಹಿತರು. ಹಣವು ಮೇಲಿನದಕ್ಕೆ ಪರ್ಯಾಯವಾಗಿರುತ್ತದೆ ಎಂಬ ತಪ್ಪು ಕಲ್ಪನೆ ಅನೇಕರಿಗಿದೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ ಎಂದರು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಈ ವರ್ಷದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 101ನೇ ರ‌್ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನಂತರ ಮಾತನಾಡಿದ ಅವರು, ಜೀವನದಲ್ಲಿ ನಿಮ್ಮ ನೆಚ್ಚಿನ ವೃತ್ತಿಗಾಗಿ ಕನಸು ಕಾಣಬೇಕು ಎಂದರು.
ಪ್ರಾಧ್ಯಾಪಕಿ ಹಾಗೂ ಸಲಹಾ ಮಂಡಳಿ ಸದಸ್ಯೆ ಡಾ. ಪೂರ್ಣಿಮಾ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಿಕ್ವೆಲ್ ಟೆಕ್ನಾಲಜೀಸ್ ಪ್ರೈವೇಟ್‌ಲಿಮಿಟೆಡ್‌ನ ಸಹ-ಸಂಸ್ಥಾಪಕ ಕಿರಣ ಬದ್ದಿ ‘ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಶೀಲತೆಗಾಗಿ ಮಾರ್ಗ’, ಧಾರವಾಡದ ಆಫಿಸರ್ಸ್ ಅಡ್ಡಾ ಸಂಸ್ಥಾಪಕ ಭರತ ನಾವಲಗಿ ‘ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿ ಅವಕಾಶಗಳು’, ದೇಶಪಾಂಡೆ ಸ್ಟಾರ್ಟ್‌ಪ್‌ನ ಇನ್ಕೂಬೇಷನ್ ವ್ಯವಸ್ಥಾಪಕಿ ರಶ್ಮಿ ಜೋಶಿ ‘ಕರಿಯರ್ ವಿಷಯಗಳ’ ಮೇಲೆ ಚರ್ಚಿಸಿದರು. ಪ್ರೊ. ಪೂಜಾ ಚರಂತಿಮಠ, 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಕಾಲೇಜಿನ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಸ್ವಾಗತಿಸಿದರು. ಶಾರದ ಪ್ರಾರ್ಥಿಸಿದರು. ಪ್ರೊ. ವಿನಂತಿ ನಾಯ್ಕ್ ಮತ್ತು ಪ್ರೊ. ಅಕ್ಷತಾ ಬಿಳಗಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net