ಅಭಿವೃದ್ಧಿಗೆ ಸಲಹೆ ನೀಡಿ, ಕೆಟ್ಟ ಪದ ಬಳಸಿದರೆ ಸುಮ್ಮನಿರಲ್ಲ

Advise development, don't just use bad words
ಜಮಖಂಡಿ ನಗರದ ಗಹ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು.
Published on

ಜಮಖಂಡಿ: ಸ್ವಘೋಷಿತ ರೈತ ಮುಖಂಡ ಬಿ.ಎಸ್. ಸಿಂಧೂರ ಸ್ವಾರ್ಥ ಹಾಗೂ ಅಧಿಕಾರಕ್ಕಾಗಿ ಪಕ್ಷಗಳನ್ನು ಬದಲಿಸುವ ಕೆಟ್ಟ ರಾಜಕಾರಣಿ ಎಂದು ಎಲ್ಲರಿಗೂ ಗೊತ್ತಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೋಪಿಸಿದರು.

ನಗರದ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಳ-ಸಾವಳಗಿ ಏತ ನೀರಾವರಿ ಯೋಜನೆ ಹಲ್ಯಾಳದಿಂದ 40 ಕಿಮೀ ದೂರ ನೀರು ಹರಿಸುವ ಯೋಜನೆ ಇದಾಗಿದೆ. ಇದರಿಂದ ನಮ್ಮ ಜಾಕ್‌ವೆಲ್‌ವರೆಗೆ ನೀರು ಸಮರ್ಪಕವಾಗಿ ತಲುಪುತ್ತಿಲ್ಲ. ಪರ್ಯಾಯವಾಗಿ ತುಬಚಿ-ಶೂರ್ಪಾಲಿ ಮಧ್ಯ ಹೊಸ ಜಾಕ್‌ವೆಲ್ ನಿರ್ಮಿಸಿ ಪಂಪ್‌ಸೆಟ್ ಹಾಗೂ ಪೈಪ್‌ಗಳನ್ನು ಸ್ಥಳಾಂತರಿಸಿ ಅಳವಡಿಸಿದಲ್ಲಿ ಕೇವಲ 6 ಕಿಮೀನಲ್ಲಿ ನೀರು ದೊರೆಯುತ್ತದೆ. ಇದು ಶಾಶ್ವತ ಪರಿಹಾರವಾಗುತ್ತದೆ. ಈ ಕುರಿತು ಈಗಾಗಲೇ ಸಚಿವರಿಗೆ ಮನವರಿಕೆ ಮಾಡಿದ್ದೇನೆ. ಆದರೆ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ವಿವರಿಸಿದರು.

ರಾಜಕೀಯ ಎಂದರೆ ನಾನು ದೇವರ ಕೆಲಸವೆಂದು ಭಾವಿಸಿದ್ದೇನೆ. ಕ್ಷೇತ್ರದ ಅಭವೃದ್ಧಿಗೆ ಸಲಹೆ ನೀಡಿದರೆ ಸ್ವಾಗತಿಸುತ್ತೆನೆ. ಅನಗತ್ಯ ಕೆಟ್ಟ ಪದ ಬಳಕೆ ಮಾಡಿದಲ್ಲಿ ನಾನು ಸುಮ್ಮನಿರಲ್ಲ. ನಿಮ್ಮ ಜಾತಕ ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಮ್ಮ 38 ವರ್ಷದ ರಾಜಕೀಯ ಜೀವನದಲ್ಲಿ ಏನು ಸಾಧಿಸಿದ್ದೀರಿ. ಜನಸಾಮಾನ್ಯರಿಗೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಕ್ಷೇತ್ರಕ್ಕೆ ಬಂದ ನೂರಾರು ಕೋಟಿ ರೂ. ವೆಚ್ಚದ ಯೋಜನೆಗಳು ಅವೈಜ್ಞಾನಿಕತೆಯಿಂದ ಕೂಡಿವೆ. ಸರ್ಕಾರದ ಮೇಲೆ ಒತ್ತಡ ತಂದು ಸರಿಪಡಿಸುವ ಕೆಲಸ ಮಾಡುತ್ತಿದ್ದೇನೆ. ಹಿಂದಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯೋಜನೆಯನ್ನೇ ಸಂಪೂರ್ಣ ಅವೈಜ್ಞಾನಿಕವಾಗಿ ಮಾಡಿದ್ದಾರೆ. ನೂರಾರು ಕೋಟಿ ರೂ. ವ್ಯಯ ಮಾಡಿದರೂ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ ಎಂದು ಮಾಹಿತಿ ನೀಡಿದರು. ಪಿ.ಎಚ್. ಗಾಯಕವಾಡ, ಶ್ರೀಧರ ಕಂಬಿ ಇದ್ದರು.

ನಾನು ಅಪ್ರಜ್ಞಾವಂತನಾಗಿದ್ದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 40 ಸಾವಿರ ಜನರ ಜೀವನೋಪಾಯಕ್ಕೆ ಉದ್ಯೋಗ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಲಕ್ಷಾಂತರ ರೈತರ ಬದುಕಿಗೆ ನಾನೊಬ್ಬ ಸಹಕಾರಿಯಾಗುತ್ತಿರಲಿಲ್ಲ.
ಜಗದೀಶ ಗುಡಗುಂಟಿ ಶಾಸಕ, ಜಮಖಂಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net