ಆರೋಗ್ಯಯುತ ಜೀವನ ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

New jabin New
Published on

ಹುಬ್ಬಳ್ಳಿ : ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಒತ್ತಡದಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುತ್ತಿಲ್ಲ. ಪಠ್ಯದೊಂದಿಗೆ ಶಿಸ್ತುಮಯ ಜೀವನ ಅಳವಡಿಸಿಕೊಂಡು, ಆರೋಗ್ಯಯುತ ಜೀವನ ರೂಢಿಸಿಕೊಳ್ಳಬೇಕು ಎಂದು ಹಾಸನದ ಎಸ್​ಡಿಎಂ ಆಯುರ್ವೆದಿಕ್ ಆಸ್ಪತ್ರೆಯ ವೈದ್ಯ ಡಾ. ಗುರುಬಸವರಾಜ ಯಲಗಚ್ಚಿನ ಹೇಳಿದರು.

ಇಲ್ಲಿನ ಪರಪ್ಪ ಚನ್ನಪ್ಪ ಜಾಬಿನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಂದೆ, ತಾಯಿ, ಗುರುವಿಗೆ ಮೊದಲು ಮಹತ್ವ ಕೊಡಬೇಕು. ಎಷ್ಟು ಅಂಕಗಳನ್ನು ಗಳಿಸಿರುವೆನು ಎನ್ನುವದು ಮುಖ್ಯವಲ್ಲ. ಶಿಕ್ಷಣದಿಂದ ಎಷ್ಟು ಸಂಸ್ಕಾರವನ್ನು ಕಲಿತಿದ್ದೇನೆ ಎನ್ನುವುದು ತುಂಬ ಮುಖ್ಯ ಎಂದು ತಿಳಿಸಿದರು.

ಅರಿವು ಕೌಶಲ್ಯಾಭಿವೃದ್ಧಿ ಅಕಾಡೆಮಿ ನಿರ್ದೇಶಕ ಎಚ್.ವಿ. ವಿಶ್ವೇಶ ಮಾತನಾಡಿ, ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಸ್ವಂತಿಕೆಯಿಂದ ಜೀವನ ನಡೆಸುವಂತೆ ಹೇಳಿದರು.

ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾವಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಅಧ್ಯಕ್ಷತೆ ಸ್ಥಾನ ವಹಿಸಿದ್ದ ಪದವಿ ಪ್ರಾಚಾರ್ಯರಾದ ಡಾ. ಸಂಧ್ಯಾ ಕುಲಕರ್ಣಿ, ಪಿ.ಸಿ. ಜಾಬಿನ ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಪ್ರಯೋಗಾಲಯಳು, ಗ್ರಂಥಾಲಯ ಇವೆ. ವಿವಿಧ ಆಟೋಪಕರಣಗಳಿವೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಸಂಶೋಧನಾತ್ಮಕ ಗುಣವಿರುವ ಪ್ರತಿಭಾನ್ವಿತ, ನುರಿತ ಶಿಕ್ಷಕರ ಬಳಗವಿದೆ. ಇವೆಲ್ಲವುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸೃಷ್ಠಿ ಸಾಲಿಮಠ ಪ್ರಾರ್ಥಿಸಿದಳು. ಪದವಿ ಪೂರ್ವ ಪ್ರಾಚಾರ್ಯ ವಿ.ಆರ್. ವಾಘಮೋಡಿ ಸ್ವಾಗತಿಸಿದರು. ಕ್ರೀಡಾ ವೇದಿಕೆ ಉಪಾಧ್ಯಕ್ಷೆ ಅಮ್ರಿತಾ ಅಣ್ಣಿಗೇರಿ ಪರಿಚಯಿಸಿದರು. ಸವಿತಾ ಎಸ್. ಎಚ್. ನಿರೂಪಿಸಿದರು. ಗಿರೀಶ ಇಟಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net