

ಶಿರಹಟ್ಟಿ: ಮದ್ಯಪಾನ ಕುಟುಂಬಗಳ ಒಗ್ಗಟ್ಟನ್ನು ಹಾಳು ಮಾಡುತ್ತದೆ. ಗೃಹಹಿಂಸೆ, ವಾಹನ ಅಪಘಾತ, ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ. ಜನರು ಮದ್ಯಪಾನ, ನಶೆ ಪದಾರ್ಥಗಳಿಂದ ದೂರವಿರಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಜಗದ್ಗುರು ಫಕೀರೇಶ್ವರ ಮಠದಲ್ಲಿ ಶ್ರೀಕ್ಷೇತ್ರ ಧಗ್ರಾ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಸಂಶೋಧನಾ ಕೇಂದ್ರ ಉಜಿರೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪಟ್ಟಣ ಪಂಚಾಯಿತಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 1913ನೇ ಮದ್ಯವರ್ಜನ ಶಿಬಿರದಲ್ಲಿ ಅವರು ಮಾತನಾಡಿದರು.
ಮದ್ಯಪಾನವು ಲಿವರ್, ಸಿರೋಸಿಸ್, ಹೃದಯ ಸಂಬಂಧಿ ಕಾಯಿಲೆಗಳು, ಮಾನಸಿಕ ಅಸ್ವಸ್ಥತೆ ಮತ್ತು ಅನೇಕ ಪ್ರಾಣಾಪಾಯದ ಸ್ಥಿತಿಗಳಿಗೆ ಕಾರಣವಾಗುತ್ತದೆ. ಈ ಶಿಬಿರ ಸಮಾಜದ ಪ್ರಗತಿಯ ದಿಕ್ಕನ್ನು ತೋರಿಸುವ ಬೆಳಕು. ಮದ್ಯಪಾನದ ದುಷ್ಪರಿಣಾಮಗಳು ಕೇವಲ ವ್ಯಕ್ತಿಯ ಮೇಲೆ ಅಲ್ಲ, ಅವರ ಕುಟುಂಬ, ಸಮಾಜ, ಮುಂದಿನ ಪೀಳಿಗೆಗಳ ಮೇಲೆಯೂ ಪರಿಣಾಮ ಬೀರುತ್ತವೆ ಎಂದರು.
ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರಕಾಶ ಬೋರಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎ. ಬಳಿಗೇರ, ಅಜ್ಜನಗೌಡ್ರು ಪಾಟೀಲ, ನಟರಾಜ ಬಾದಾಮಿ, ಜೆ. ಚಂದ್ರಶೇಖರ, ನಂದಾ ಪಲ್ಲೇದ, ಮಹಾಂತೇಶ ದಶಮನಿ, ವಿವೇಕ ವಿನ್ವಂಟ್ ಪಾಯಸ್, ನಾಗೇಶ ವೈ.ಎ., ದಿವಾಕರ ಪೂಜಾರಿ, ಡಾ.ಸುಭಾಸ ದೈಗೊಂಡ, ಪುನೀತ್ ಓಲೇಕಾರ, ಎಚ್.ಎಂ. ದೇವಗಿರಿ ಇತರರಿದ್ದರು.