

ಹುಬ್ಬಳ್ಳಿ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವಲ್ಲಿ ಪೊಲೀಸ್ ಇಲಾಖೆ ಕಾರ್ಯ ಮಹತ್ವದ್ದಾಗಿದೆ. ಜನಸ್ನೇಹಿ ಆಡಳಿತ ನೀಡಲು ಈ ಇಲಾಖೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.
ಇಲ್ಲಿಯ ಕಾರವಾರ ರಸ್ತೆಯ ಹಳೆಯ ಸಿ.ಎ.ಆರ್. ಮೈದಾನದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ 300ಕ್ಕೂ ಅಧಿಕ ಪೊಲೀಸರು ಹುತಾತ್ಮರಾಗುತ್ತಿದ್ದಾರೆ. ದೇಶಾದ್ಯಂತ ಇಲ್ಲಿಯವರೆಗೆ ಸುಮಾರು 37 ಸಾವಿರಕ್ಕೂ ಅಧಿಕ ಪೊಲೀಸರು ಹುತಾತ್ಮರಾಗಿದ್ದಾರೆ. ಪ್ರತಿ ದಿನವೂ ಹೊಸ ಸವಾಲು ಎದುರಿಸುವ ಪೊಲೀಸರ ಸೇವೆ ಅನನ್ಯ. ಹಗಲು-ರಾತ್ರಿ, ಬಿಸಿಲು-ಮಳೆ ಲೆಕ್ಕಿಸದೇ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಆಧುನಿಕ ತಂತ್ರಜ್ಞಾನದಿಂದ ಹಲವಾರು ಸೈಬರ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿದೆ. ಕತ್ತಿಯ ಜೊತೆಗೆ ಬುದ್ಧಿಯನ್ನು ಉಪಯೋಗಿಸಬೇಕಿದೆ. ಜನರು ನೆನೆಯುವ ರೀತಿ ಒಳ್ಳೆಯ ಕಾರ್ಯ ಮಾಡಬೇಕು. ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಉತ್ತಮವಾಗಿ ಸ್ಪಂದಿಸಬೇಕು. ಸಮಾಜಕ್ಕೆ ಮಾದರಿಯಾಗುವಂತರಿರಬೇಕು ಎಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಈ ವರ್ಷ ದೇಶದಲ್ಲಿ 216 ಪೊಲೀಸರು ಹುತಾತ್ಮರಾಗಿದ್ದಾರೆ. ಅದರಲ್ಲಿ ಕರ್ನಾಟಕದ ಐವರಿದ್ದಾರೆ. ಕೆಲ ವರ್ಷಗಳಿಂದ ಹುತಾತ್ಮರ ಸಂಖ್ಯೆ ಕಡಿಮೆಯಾಗಿದೆ. ನಕ್ಸಲ್ ದಾಳಿ, ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಪೊಲೀಸರು ಮರಣ ಹೊಂದುತ್ತಿದ್ದಾರೆ. ಒಳ್ಳೆಯ ಕೆಲಸಗಳನ್ನು ಇಲಾಖೆ ಮಾಡುತ್ತಿದೆ. ಸಾರ್ವಜನಿಕರು ನಮ್ಮ ಇಲಾಖೆಯೊಂದಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರಗಳನ್ನು ಮಾದಕ ವಸ್ತು ಮುಕ್ತವನ್ನಾಗಿಸಲಾಗುವುದು ಎಂದರು.
ಪರೇಡ್ ಕಮಾಂಡರ್ ಮಾರುತಿ ಹೆಗಡೆ ನೇತೃತ್ವದ ಪೊಲೀಸ್ ಕವಾಯತು ತಂಡ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಹುತಾತ್ಮರಿಗೆ ಗೌರವ ಸಲ್ಲಿಸಿತು. ಗಣ್ಯರು ಹುತಾತ್ಮರಿಗೆ ಹೂಗುಚ್ಛ ಸಮರ್ಪಿಸಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ, ವೈ.ಕೆ. ಕಾಶಪ್ಪನವರ, ಎಸಿಪಿ ಪ್ರಶಾಂತ ಹಿಟ್ಟನಗೌಡರ, ನಿವೃತ್ತ ಡಿಐಜಿ ರವಿಕುಮಾರ ನಾಯ್ಕ, ಕಿಮ್ಸ್ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ, ಮುಖಂಡರಾದ ಡಾ.ವಿ.ಎಸ್.ವಿ. ಪ್ರಸಾದ, ಗುರುನಾಥ ಉಳ್ಳಿಕಾಶಿ, ವಿಠ್ಠಲ ಲದ್ವಾ, ಶಿವಾನಂದಪ್ಪ, ಇಂದ್ರವದರ ಓಜಾ, ನವೀನ ಕುಲಕರ್ಣಿ, ಶಾಂತರಾಜ ಪೋಳ, ಕೃಷ್ಣ ಬ್ಯಾಡಗಿ ಇತರರು ಉಪಸ್ಥಿತರರಿದ್ದರು.