

ಮೈಸೂರು: ಮೈಸೂರು ಕೋ-ಆಪರೇಟಿವ್ ಬ್ಯಾಂಕ್‌ನ ಪ್ರತಿಯೊಬ್ಬ ಸದಸ್ಯರು ಉಳಿತಾಯ ಖಾತೆ (ಎಸ್‌ಬಿ ಅಕೌಂಟ್) ಹಾಗೂ ಚಾಲ್ತಿ ಖಾತೆ (ಕರೆಂಟ್ ಅಕೌಂಟ್) ತೆರೆಯಿರಿ. ಈಗಾಗಲೇ ತೆರೆದಿರುವವರು ಸಹ ಅದನ್ನು ಪ್ರಚಲಿತದಲ್ಲಿ ಬಳಸುವ ಮೂಲಕ ಸಕ್ರಿಯವಾಗಿರಬೇಕು ಎಂದು ಬ್ಯಾಂಕ್ ಅಧ್ಯಕ್ಷ ಜೆ.ಯೋಗೇಶ್ ಹೇಳಿದರು.
ನಗರದ ಕ್ಯಾತಮಾರನಹಳ್ಳಿಯ ಹುಲಿಯಮ್ಮ ದೇವಾಲಯದ ಆವರಣದಲ್ಲಿ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್‌ನಿಂದ ಆಯೋಜಿಸಿದ್ದ ಉಳಿತಾಯ ಖಾತೆ(ಎಸ್‌ಬಿ ಅಕೌಂಟ್) ಹಾಗೂ ಚಾಲ್ತಿ ಖಾತೆ (ಕರೆಂಟ್ ಅಕೌಂಟ್) ತೆರೆಯುವ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ಸದಸ್ಯನು ಮತದಾನದ ಹಕ್ಕು ಪಡೆಯಲು ಉಳಿತಾಯ ಖಾತೆ ತೆರೆದು ವ್ಯವಹರಿಸುವುದು ಕಡ್ಡಾಯವಾಗಿರುತ್ತದೆ. ಕಳೆದ ಐದು ವರ್ಷದಿಂದ ಎಸ್‌ಬಿ ಅಕೌಂಟ್ ಇಲ್ಲದೆ ಮತದಾನದಿಂದ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ನಗರದ ಎಲ್ಲ ಭಾಗದಲ್ಲಿ ಉಳಿತಾಯ, ಚಾಲ್ತಿ ಖಾತೆ ತೆರೆಯಲು ಅಭಿಯಾನ ನಡೆಸಲು ತೀರ್ಮಿಸಲಾಗಿತ್ತು ಎಂದರು.
ಅದರಂತೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ಎರಡು ವಾರಕ್ಕೆ ಒಂದು ಕಡೆ ಈ ಅಭಿಯಾನ ನಡೆಯಲಿದೆ. ಸದಸ್ಯರು ಇದರ ಸದುಪಯೋಗಪಡಿಸಿ ಕೊಳ್ಳಬೇಕಿದೆ ಎಂದರು.
ಉಳಿತಾಯ ಅಥವಾ ಚಾಲ್ತಿ ಖಾತೆ ತೆರೆಯಲು ಈ ಕೆಳಕಂಡ ದಾಖಲೆಗಳು ಕಡ್ಡಾಯವಾಗಿರುತ್ತದೆ. 500 ರೂ. ಪ್ರಾಥಮಿಕ ಠೇವಣಿ, ಆಧಾರ್, ಪಾನ್‌ಕಾರ್ಡ್ ಜೆರಾಕ್ಸ್ ಪ್ರತಿ, 4 ಭಾವಚಿತ್ರ, ಷೇರ್ ಪಾಸ್ ಪುಸ್ತಕ ಇತರೆ ದಾಖಲಾತಿಗಳು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಕುಂಬಾರಕೊಪ್ಪಲು, ಪಡುವಾರಹಳ್ಳಿ ಆವರಣದಲ್ಲಿಯೂ ಈ ಹಿಂದೆ ಮಾಡಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು. ಎರಡು ವಾರ್ಷಿಕ ಸಭೆ ಕಡ್ಡಾಯವಾಗಿ ಹಾಜರಾಗುವಂತೆ ತಿಳಿಸಿದ್ದೆವು. 11,200 ಜನರಿಗಷ್ಟೇ ಮತದಾನದ ಹಕ್ಕು ಬಂದಿತು. ಉಳಿದವರೆಲ್ಲರೂ ಮತದಾನದಿಂದ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಮೊದಲಿಗೆ ನೂತನ ಆಡಳಿತ ಮಂಡಳಿ ಅಭಿಯಾನ ಆರಂಭಿಸಿದ್ದೇವೆ ಎಂದರು.
ಯುಪಿಐ, ಎಟಿಎಂಗೆ ಚಿಂತನೆ:
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಹಣ ವರ್ಗಾವಣೆ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶೀಘ್ರ ಸೊಸೈಟಿಯ ಯುಪಿಐ ಐಡಿ ಮೂಲಕ ಹಣ ವರ್ಗಾವಣೆ ಅವಕಾಶ ಕಲ್ಪಿಸಿಕೊಡಲು ಚಿಂತನೆಯಿದೆ. ಆದರೆ ಖಾತೆ ತೆರೆಯದೆ ಎಟಿಎಂ, ಯುಪಿ ಆನ್‌ಲೈನ್ ವ್ಯವಸ್ಥೆ ಮಾಡಿದರು ಪ್ರಯೋಜನ ಆಗುವುದಿಲ್ಲ. ಹಾಗಾಗಿ ಸದಸ್ಯರು ಮೊದಲು ಖಾತೆ ತೆರೆದು ವರ್ಗಾವಣೆ ಮಾಡುವಂತೆ ಅವರು ಕೋರಿದರು.
ಬ್ಯಾಂಕ್‌ನ ನಿರ್ದೇಶಕರಾದ ಪಡುವಾರಹಳ್ಳಿ ಎಂ.ರಾಮಕೃಷ್ಣ, ಪಿ.ರಾಜೇಶ್ವರಿ, ಎನ್.ಯೋಗಾನಂದ, ಜಿ.ನಿರಂಜನ್, ಸಿ.ಚಂದ್ರಶೇಖರ್, ಎಚ್. ಹರೀಶ್‌ಕುಮಾರ್, ಆರ್.ಸೋಮಣ್ಣ, ಕೆ ಗಿರೀಶ್ ನಗರಪಾಲಿಕೆ ಮಾಜಿ ಸದಸ್ಯ ನಾರಾಯಣ ಲೋಲಪ್ಪ ಇತರರು ಇದ್ದರು.