ದೇಶದ ಆರ್ಥಿಕ ಪ್ರಗತಿಗೆ ಕೈಜೋಡಿಸಲು ಸಲಹೆ

h22-jabin
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ದೇಶದ ಆರ್ಥಿಕ ಪ್ರಗತಿಗೆ ಕೈಜೋಡಿಸಬೇಕು. ಈ ಮೂಲಕ ತಮ್ಮ ಜೀವನದಲ್ಲಿಯೂ ಅಭಿವೃದ್ಧಿ ಹೊಂದಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸಿ. ಬಸವರಾಜ ಹೇಳಿದರು.

ಇಲ್ಲಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಾಗತಿಕ ಆರ್ಥಿಕತೆ ತೀವ್ರವಾಗಿ ಬೆಳೆಯುತ್ತಿದೆ. ಪದವೀಧರರು ಅದಕ್ಕೆ ಸ್ಪಂದಿಸಬೇಕು. ಅತ್ಯಾಧುನಿಕ ಕೌಶಲ ಅಳವಡಿಸಿಕೊಂಡು ಪ್ರಗತಿ ಸಾಧಿಸಬೇಕು ಎಂದರು.

ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಕಲಿಕೆಯು ಜೀವನದಲ್ಲಿ ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನದ ಜತೆಗೆ ಸಂಶೋಧನೆ ನಡೆಸಬೇಕು ಎಂದು ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರಿ ಉಪಕುಲಪತಿ ಪ್ರೊ.ಎಸ್. ಜಯಶ್ರೀ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬರುವ ಸವಾಲು ಎದುರಿಸಬೇಕು ಮತ್ತು ಸಕಾರಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದರು.

ಸಂಸ್ಥೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜ್ ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ. ಸುರೇಶ ಎಂ. ತುವಾರ, ಶಿಕ್ಷಣ ತಜ್ಞ ಪ್ರೊ.ಎಸ್.ಎಸ್. ಬೆಂಚಳ್ಳಿ, ವಿದ್ಯಾ ಪರಿಷತ್ತಿನ ಸದಸ್ಯ ಪ್ರೊ.ವಿ.ಕೆ. ರೇವಣಕರ ಇತರರು ಉಪಸ್ಥಿತರಿದ್ದರು.

ಪ್ರಾಚಾರ್ಯ ಡಾ.ಎಲ್.ಡಿ. ಹೊರಕೇರಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಮಹಾಂತೇಶ ಎಂ. ಪರೀಕ್ಷಾ ವರದಿ ಓದಿ, ಉಪನಿಷತ್ತಿನ ಅನುಶಾಸನ ಬೋಧಿಸಿದರು. ಉಪನ್ಯಾಸಕಿಯರಾದ ಡಾ. ಸ್ನೇಹಾ ಚಿಂತಾ ಮತ್ತು ಸುನೇನಾ ಎಂ.ಎಂ. ನಿರೂಪಿಸಿದರು. ಮೇಘಾ ದೇಶಪಾಂಡೆ ಪದವಿ ಪ್ರಮಾಣ ಪತ್ರ ವಿತರಿಸಿದರು.

ಚೈತ್ರಾ ಎಸ್. ಸಲಗರ, ಪಿ. ವರ್ಷಾ, ಎ.ಎನ್. ಭಾಗ್ಯಶ್ರೀ, ಅಕ್ಷತಾ ಹುಬ್ಬಳ್ಳಿ, ವಿದ್ಯಾ ಗುಂಜಟ್ಟಿ, ಕುಶಾಲ ಮುದೋಳಕರ ಬಂಗಾರದ ಪದಕಗಳನ್ನು ಪಡೆದರು. ಬಿ.ಎಸ್ಸಿಯ 403, ಬಿಸಿಎದಲ್ಲಿ 213, ಎಂ.ಎಸ್ಸಿ ಬಯೋಟೇಕ್ನಾಲಜಿ 16, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ 2, ಎಂ.ಎಸ್ಸಿ ಭೌತಶಾಸ್ತ್ರ 4, ಎಂ.ಎಸ್ಸಿ ರಸಾಯನಶಾಸ್ತ್ರ 30 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಅತಿಥಿಗಳಿಂದ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net