ಅಶಕ್ತ ಕಲಾವಿದರಿಗೆ ನೆರವಾಗಲು ಸಲಹೆ

Yakshmitra
Published on

ಕುಮಟಾ: ಅಶಕ್ತ ಕಲಾವಿದರಿಗೆ ನೆರವಾಗುವುದು ನಮ್ಮ ಕರ್ತವ್ಯ. ಕಲಾವಿದರಾಗುವುದು ಎಷ್ಟು ಕಷ್ಟವೋ, ಕಲಾವಿದರ ಜೀವನವೂ ಕಷ್ಟಕರವಾಗುತ್ತಿದೆ. ಕಲೆಯನ್ನೇ ನಂಬಿದವರಿಗೆ ನೆರವಾಗುವ ಮೂಲಕ ಅವರಿಗೆ ಧೈರ್ಯ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾಲ್ಗಳ್ಳಿಯ ಯಾಜಿ ಯಕ್ಷ ಮಿತ್ರ ಮಂಡಳಿಯ 16ನೇ ವರ್ಷದ ’ಯಾಜಿ ಯಕ್ಷಮಿತ್ರ’ ಪ್ರಶಸ್ತಿ ಪ್ರದಾನ, ನಿಧಿ ಸಮರ್ಪಣೆ ಹಾಗೂ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಯಾಜಿ ಸಾಲೇಬೈಲು ಮಾತನಾಡಿ, ಯಾಜಿ ಅವರು ಕಲೆಯ ಮೂಲಕ ಗುರುತಿಸಿಕೊಂಡವರು. ಜತೆಗೆ ಅಶಕ್ತರಿಗೆ ನೆರವಾಗಿ ಮಾದರಿ ಬದುಕನ್ನು ಬದುಕುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಯಕ್ಷಗಾನ ಶ್ರೇಷ್ಠ ಕಲೆ. ಅಶಕ್ತ ಕಲಾವಿದರಿಗೆ ನೆರವಾಗುವ ಗುಣ ದೊಡ್ಡದು. ಬದುಕಿನಲ್ಲಿ ಮಾನವೀಯ ಗುಣ ದೊಡ್ಡದು ಎಂದರು.

ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ನಾಗೂರು ವಾಸುದೇವ ಐತಾಳ ಮಾತನಾಡಿದರು. ಖ್ಯಾತ ಭಾಗವತ ತ್ರ್ಯಂಬಕ ಹೆಗಡೆ ಇಡುವಾಣಿ ಅವರಿಗೆ ’ಯಾಜಿ ಯಕ್ಷಮಿತ್ರ’ ಪ್ರಶಸ್ತಿ ಪ್ರದಾನ ಮಾಡಿ ನಿಧಿ ಸಮರ್ಪಿಸಲಾಯಿತು.

ಸಂಘಟಕ ಬಳ್ಕೂರು ಕೃಷ್ಣಯಾಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಗಾಲ ಚಿದಾನಂದ ಭಂಡಾರಿ ನಿರೂಪಿಸಿದರು. ಅನಂತ ಅಡಿ ವಂದಿಸಿದರು. ನಂತರ ಮೋಕ್ಷ ಸಂಗ್ರಾಮ ಯಕ್ಷಗಾನ ಆಖ್ಯಾನ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net