

ಧಾರವಾಡ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಕೌಶಲಭರಿತ ಯುವಕರನ್ನು ನಿರ್ಮಾಣ ಮಾಡಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಅತಿ ಮಹತ್ವದ್ದು ಎಂದು ಸೋನಿಯಾ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷೆ ರೂಪಾ ಡಂಬಳ ಹೇಳಿದರು.
ನಗರದ ಸೋನಿಯಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿ.ಎಡ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿ ಒಕ್ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಕೇವಲ ಓದಿಗಾಗಿ ಸೀಮಿತಗೊಳ್ಳಬಾರದು. ನಾಗರಿಕ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಉತ್ತಮ ಕೌಶಲ ಹೊಂದಿದ ಶಿಕ್ಷಕರಾಗಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೊರಹೊಮ್ಮಬೇಕು ಎಂದು ಆಶಿಸಿದರು.
ಟ್ರಸ್ಟ್ ಅಧ್ಯಕ್ಷ ಡಾ.ಎಚ್.ವಿ. ಡಂಬಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ವಿಶೇಷ ಸ್ಥಾನಮಾನ, ವಿಭಿನ್ನ ಅವಕಾಶಗಳು ಲಭ್ಯವಾಗುತ್ತಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಸಾಧನೆ ಮಾಡುತ್ತಿದ್ದಾರೆ. ಅಲ್ಲದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.
ಟ್ರಸ್ಟ್ ಉಪಾಧ್ಯಕ್ಷೆ ಸೋನಿಯಾ ಡಂಬಳ, ಕಾರ್ಯದರ್ಶಿ ಎಸ್.ವಿ. ಡಂಬಳ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಎಸ್.ಎಸ್.ಹಿರೇಮಠ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ರಾಜೇಶ್ವರಿ ಗರಗ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಪಿ.ಬಿ. ಹಳ್ಳಿ ವಂದಿಸಿದರು.