

ಉಪ್ಪಿನಬೆಟಗೇರಿ: ವಿಜ್ಞಾನಿಗಳು ಶಿಫಾರಸು ಮಾಡಿದ ಬೀಜಗಳ ಬಳಕೆಯಿಂದ ಬೆಳೆಗಳಿಗೆ ಎಲೆ ಚುಕ್ಕಿ ರೋಗ ಹಾಗೂ ಮುರುಟು ರೋಗ ಕಂಡು ಬರುವುದಿಲ್ಲ ಎಂದು ತರಕಾರಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅರುಣಕುಮಾರ ಹೇಳಿದರು.
ಧಾರವಾಡ ತಾಲೂಕಿನ ಕವಲಗೇರಿ ವಲಯದ ಸೋಮಾಪುರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧಾರವಾಡ ತಾಲೂಕು ವತಿಯಿಂದ ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ತರಕಾರಿ ಬೇಸಾಯ ಕುರಿತು ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತರಕಾರಿ ಬೆಳೆಯುವ ರೈತರು ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಬಿಡುವುದು, ರಸ ಗೊಬ್ಬರ ಹಾಗೂ ಔಷಧಗಳ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿ ಪದ್ದತಿ ಅನುಸರಿಸಿ ರೋಗಮುಕ್ತ ಜೀವನ ನಡೆಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಪ್ರಾದೇಶಿಕ ತೋಟಗಾರಿಕೆ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ. ಲಕ್ಷ್ಮಣ ಕುಕನೂರ ಮಾತನಾಡಿ, ತರಕಾರಿ ಬೇಸಾಯದಲ್ಲಿ ಸಾಕಷ್ಟು ಹಂತಗಳಿದ್ದು, ಪ್ರತಿಯೊಂದು ಬೆಳೆಗೆ ಅದನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇ ಆದಲ್ಲಿ ತರಕಾರಿಯಲ್ಲಿ ಅಧಿಕ ಲಾಭ ಪಡೆದು ಆರ್ಥಿಕವಾಗಿ ಸುಧಾರಣೆ ಆಗಬಹುದು ಎಂದರು.
ಚನ್ನವೀರಯ್ಯ ಹಿರೇಮಠ, ಶಂಕ್ರಯ್ಯ ಚಿಕ್ಕಮಠ, ಕಲ್ಲಪ್ಪ ಹುಲಿ, ಪರಮೇಶ್ವರಪ್ಪ ಡೊಳ್ಳಿನ, ಸಿದ್ದಪ್ಪ ಡೊಳ್ಳಿನ ಹಾಗೂ ರೈತರು ಉಪಸ್ಥಿತರಿದ್ದರು. ಯೋಜನೆಯ ಕೃಷಿ ಅಧಿಕಾರಿ ಶಂಕ್ರಯ್ಯ ಹಿರೇಮಠ, ಪ್ರಭಾವತಿ ಪಾಟೀಲ ಹಾಗೂ ದಿವ್ಯ ಡೊಳ್ಳಿನ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮದ 60 ಜನ ರೈತರು ತರಬೇತಿಯ ಉಪಯೋಗ ಪಡೆದುಕೊಂಡರು.