ಅಪಾಯಗಳಾಗದಂತೆ ಎಚ್ಚರ ವಹಿಸಲು ಸೂಚನೆ

18 Jaggu 8
Published on

ಧಾರವಾಡ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ, ಜಲಾವೃತ, ರಸ್ತೆ ಅಪಘಾತ, ವಿದ್ಯುತ್ ಅವಘಡ, ಮನೆ ಕುಸಿತ ಮುಂತಾದ ಅಪಾಯಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಜೀವ, ಆಸ್ತಿಯ ರಕ್ಷಣೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಸೂಚಿಸಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು. ಮಳೆಯಿಂದಾಗಿ ಮಣ್ಣಿನ ಮನೆಗಳು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.ಮುಂಜಾಗ್ರತೆ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಸೂಚಿಸಿದರು. ಮಳೆಯಿಂದ ಜನ-ಜಾನುವಾರುಗಳಿಗೆ ಜೀವ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ರಸ್ತೆ, ಸೇತುವೆ ಹಾನಿಯಾಗಿದ್ದಲ್ಲಿ ಪರಿಶೀಲಿಸಬೇಕು ಎಂದರು.

ಜಿಲ್ಲೆಯ ಬೆಣ್ಣಿ ಹಳ್ಳ, ತುಪ್ಪರಿ ಹಳ್ಳ, ಬೆಡ್ತಿ ಹಳ್ಳ ಸೇರಿ ವಿವಿಧ ತಾಲೂಕುಗಳಲ್ಲಿ ಹರಿಯುತ್ತಿರುವ ಹಳ್ಳ ಕೊಳ್ಳಗಳು ತುಂಬಿ ಹರಿಯುವ ಸಾಧ್ಯತೆ ಇದೆ. ಅಪಾಯಕಾರಿ ಮಟ್ಟ ತಲುಪಿದ ಸಂದರ್ಭದಲ್ಲಿ ತಕ್ಷಣ ಎಚ್ಚರಿಕೆ ನಾಮಲಕಗಳನ್ನು ಅಳವಡಿಸಬೇಕು. ತಗ್ಗು ಪ್ರದೇಶಗಳು, ಹಳ್ಳ, ಕೆರೆಗಳ ತೀರ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಾಸಿಸುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಕ್ರಮ ವಹಿಸಬೇಕು ಎಂದರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ವೇದಿಕೆಯಲ್ಲಿದ್ದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net