

ಹುಬ್ಬಳ್ಳಿ: ಪ್ರೊಬಸ್ ಕ್ಲಬ್ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಮೀಪದ ನವನಗರದ ಈಶ್ವರ ದೇವಸ್ಥಾನದ ಸಭಾ ಭವನದಲ್ಲಿ ಇತ್ತೀಚೆಗೆ ಏರ್ಪಾಟಾಗಿತ್ತು.
ಡಿಸಿಪಿ ರವೀಶ ಸಿ.ಆರ್. ಮಾತನಾಡಿ, ಹಿರಿಯ ನಾಗರಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಹಿರಿಯ ನಾಗರಿಕರ ಸಂಘವು ಅದರ ಸದಸ್ಯರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸಿ ಬಗೆಹರಿಸಬೇಕು. ಯಾವುದೇ ಕಾರಣಕ್ಕೂ ಸದಸ್ಯರ ಕೋರಿಕೆಗಳಿಗೆ ಬೇಸರ ವ್ಯಕ್ತ ಪಡಿಸಬಾರದು ಎಂದು ಸಂಘಕ್ಕೆ ಸಲಹೆ ನೀಡಿದರು.
ಖ್ಯಾತ ಸಾಹಿತಿ, ಶಾಸನಗಳ ತಜ್ಞೆ ಹನುಮಾಕ್ಷಿ ಗೋಗಿ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಯುವಕರು, ಹಿರಿಯ ನಾಗರಿಕರ ಆರೋಗ್ಯದ ಕಾಳಜಿ ವಹಿಸಬೇಕು. ಹಿರಿಯ ನಾಗರಿಕರು ಗ್ರಂಥಾಲಯವಿದ್ದಂತೆ. ಕಿರಿಯರು ಹಿರಿಯ ನಾಗರಿಕರ ಅನುಭವದ ಮಾತುಗಳನ್ನು ಗೌರವಿಸಬೇಕು ಎಂದರು.
ಸರ್ಕಾರ ಹಿರಿಯ ನಾಗರಿಕರ ಹಕ್ಕುಗಳನ್ನು ಕಡೆಗಣಿಸಬಾರದು. ವಿಮಾನಯಾನದಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಮತ್ತು ಸ್ಥಳ ಕಾಯ್ದಿರಿಸುವಿಕೆಯ ಸೌಲಭ್ಯ ಕೊಡಬೇಕು. ಜಿಲ್ಲಾ ಮಟ್ಟದಲ್ಲಿ ಹಿರಿಯ ನಾಗರಿಕರ ಸಭಾ ಭವನ ನಿರ್ಮಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಎಂ.ಎಂ. ಗುಂಜಾಳ ಅಧ್ಯಕ್ಷತೆ ವಹಿಸಿದ್ದರು. ನವನಗರದ ಪ್ರೊಬಸ್ ಕ್ಲಬ್ ಅಧ್ಯಕ್ಷ ಶಿವಪ್ಪ ನೀರಾವರಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈರಣ್ಣ ಬಡಿಗೇರ, ನಾಗಪ್ಪ ಕುರ್ತಕೋಟಿ, ಶೇಖರ ಹುಬ್ಬಳ್ಳಿ, ಮಂಜುಳಾ ಸುರೇಬಾನ, ಎಸ್.ಎಸ್. ಕರಡಿಯವರ, ಫಕ್ಕೀರಪ್ಪ ಸೋಮಗುಂಡ, ಬಸವರಾಜ ಗಾಣಿಗೇರ, ಶಿವಯೋಗಿ ಸೂರೇಬಾನ ಇತರರು ಇದ್ದರು.
ಜಾನಪದ ತಜ್ಞ, ಕಲಾವಿದ ಡಾ. ರಾಮು ಮೂಲಗಿ ಅವರಿಂದ ಜಾನಪದ ಕಾರ್ಯಕ್ರಮ ಜರುಗಿತು.