

ಹುಬ್ಬಳ್ಳಿ: ಧಾರವಾಡದ ಗುರುದೇವ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ)ವತಿಯಿಂದ ಧಾರವಾಡ ಶಹರ ಮಟ್ಟದ ಚದುರಂಗ (ಚೆಸ್)ಕ್ರೀಡಾಕೂಟವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಧಾರವಾಡ ಜಿಲ್ಲಾ ಕ್ರೀಡಾ ಸಂಯೋಜಕ ಯು.ಎನ್. ಹಜಾರೆ ಅತಿಥಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮನೋದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಗುರುದೇವ ಶಿಕ್ಷಣ ಸಂಸ್ಥೆ ನಿರ್ದೇಶಕ ಅಖಿಲ್ ಕುಮಾರ ಹಲಗತ್ತಿ ಮಾತನಾಡಿ, ಚದುರಂಗ ಆಟವು ಚತುರರ ಆಟ. ಸೋಲು -ಗೆಲುವು ಸಮನಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಮಹಮ್ಮದ್ ಸಾಜೀದ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಮದನ್ ಇ.ಜಿ. ಸ್ವಾಗತಿಸಿದರು. ಉಪಪ್ರಾಚಾರ್ಯ ಮಹಾಲಿಂಗ ಕಮತಗಿ ವಂದಿಸಿದರು. ಉಪನ್ಯಾಸಕ ಕುಮಾರ ಪೂಜಾರ ನಿರೂಪಿಸಿದರು.