ಕೊಡವ ಜನಾಂಗೀಯ ಪ್ರಮಾಣ ಪತ್ರ ಪಡೆಯಲು ಸಲಹೆ

N.U.NACHAPPA
Published on

ಮಡಿಕೇರಿ: ಕೊಡವರು ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ಪಡೆಯಲು ಜಮ್ಮಾ ಪ್ರಮಾಣ ಪತ್ರಗಳನ್ನು ಅವಲಂಬಿಸುವ ಬದಲು ಕೊಡವ ಜನಾಂಗೀಯ ಪ್ರಮಾಣ ಪತ್ರವನ್ನು ಪಡೆಯುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಲಹೆ ನೀಡಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಸಂವಿಧಾನದ ೨೫ ಮತ್ತು ೨೬ನೇ ವಿಧಿಗಳ ಅಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವ ಕೊಡವ ಸಮುದಾಯದ ಹಕ್ಕನ್ನು ಧಾರ್ಮಿಕ ಸಂಸ್ಕಾರವಾಗಿ ಸಂರಕ್ಷಿಸಲು ಕೊಡವ ಜನಾಂಗೀಯ ಪ್ರಮಾಣ ಪತ್ರವನ್ನು ಪಡೆಯುವ ಕ್ರಮ ಸಹಕಾರಿಯಾಗಲಿದೆ. ಕೊಡವ ಸಮುದಾಯದ ಸಂಪ್ರದಾಯ ಮತ್ತು ಹಕ್ಕುಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಕೊಡವ ಜನಾಂಗ ಪ್ರಮಾಣ ಪತ್ರದ ಅಗತ್ಯವಿದೆ. ಕೊಡವ ಪ್ರಮಾಣ ಪತ್ರವು ಜಮ್ಮಾ ಹೊಂದಿರುವವರ ಪ್ರಮಾಣ ಪತ್ರಗಳನ್ನು ಅವಲಂಬಿಸದೆ ಬಂದೂಕು ವಿನಾಯಿತಿಯ ಹಕ್ಕನ್ನು ಗಟ್ಟಿಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಜಮ್ಮಾ ಭೂಮಿಯನ್ನು ಖರೀದಿಸುವ ಮೂಲಕ ಅಥವಾ ಈ ಉದ್ದೇಶಕ್ಕಾಗಿ ಮಾತ್ರ ಕೊಡವ ಮಹಿಳೆಯರೊಂದಿಗೆ ವಿವಾಹವಾಗುವ ಮೂಲಕ ಕೊಡವರಲ್ಲದ ಹೊರಗಿನವರು ಬಂದೂಕು ವಿನಾಯಿತಿ ಸವಲತ್ತನ್ನು ಬಳಸಿಕೊಳ್ಳುವುದನ್ನು ತಡೆಯಬೇಕು. ಕೊಡವ ಸಮುದಾಯದ ಜಾನಪದ ಕಾನೂನು ವ್ಯವಸ್ಥೆಗಳು ಮತ್ತು ಆದಿಮಸಂಜಾತ ಏಕ-ಜನಾಂಗೀಯ ಗುರುತನ್ನು ಬಲಪಡಿಸಬೇಕು. ಕೊಡವ ಸಮುದಾಯದ ಅರ್ಹ ಸದಸ್ಯರು ಬಂದೂಕು ವಿನಾಯಿತಿ ಪ್ರಮಾಣ ಪತ್ರವನ್ನು ಪಡೆಯುತ್ತಿದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು, ಇದರಿಂದಾಗಿ ರಾಷ್ಟ್ರೀಯ ಭದ್ರತೆಗೆ ಮತ್ತು ಸುರಕ್ಷತೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನ ಹೊರಗಿನ ಕೆಲವು ವ್ಯಕ್ತಿಗಳು ಭಾಗಮಂಡಲದಲ್ಲಿ ಜಮ್ಮಾ ಭೂಮಿಯನ್ನು ಖರೀದಿಸಿ, ಜಮ್ಮಾಲ್ಯಾಂಡ್ ಒಕ್ಕಲುತನದ ನೆಪದಲ್ಲಿ ಬಂದೂಕು ಪರವಾನಗಿ ವಿನಾಯಿತಿ ಪ್ರಮಾಣಪತ್ರಗಳನ್ನು ಪಡೆದು ಬಂದೂಕುಗಳನ್ನು ಹೊಂದಿದ್ದರು. ಇದರಿಂದಾಗಿ ಆದಿಮಸಂಜಾತ ಕೊಡವರು ಮತ್ತು ಜಮ್ಮಾ ಒಕ್ಕಲುದಾರರಿಗೆ ಮಾತ್ರ ಇರುವ ಈ ಶಾಸನಬದ್ಧ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ರಾಜದ್ರೋಹ ಎಸಗಿದರು ಮತ್ತು ದುರುಪಯೋಗಪಡಿಸಿಕೊಂಡರು. ಇದನ್ನು ಇತ್ತೀಚೆಗೆ ಪೊಲೀಸ್ ಇಲಾಖೆಯೂ ಖಚಿತಪಡಿಸಿದೆ ಎಂದು ಎನ್.ಯು.ನಾಚಪ್ಪ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net