

ಹುಬ್ಬಳ್ಳಿ: ಭಾರತದ ಮೂಲ ಪದ್ಧತಿ ಆಯುರ್ವೇದ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬರೀ ಆಯುರ್ವೇದ ಪದ್ಧತಿ ಅಧ್ಯಯನ ಮಾಡಿದರೆ ಸಾಲದು, ಆಯುರ್ವೇದ ಉದ್ಯಮ ಸ್ಥಾಪಿಸಲು ಪೂರಕ ವಾತಾವರಣ ನಿರ್ಮಿಸಿಕೊಳ್ಳಬೇಕು ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರು ಸಲಹೆ ನೀಡಿದರು.
ಇಲ್ಲಿಯ ಹೆಗ್ಗೇರಿಯ ಆಯುರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಹಳೇ ವಿದ್ಯಾರ್ಥಿಗಳ ಸಂಘದ 25ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಮ್ಮ ಪರಿಸರದಲ್ಲಿ ಔಷಧೀಯ ಸಸ್ಯಗಳಿರುವ ಕಾಡುಗಳಿವೆ. ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಆಯುರ್ವೇದಕ್ಕೆ ಸಂಬಂಧಿಸಿ ಸಸ್ಯ ಸಂಪತ್ತು ಇದೆ. ಗಿಡಮೂಲಿಕೆ ಇದೆ. ಇಲ್ಲಿ ಅಧ್ಯಯನ ಮಾಡಿದರೆ ಬಹಳಷ್ಟು ಜ್ಞಾನ ಪಡೆಯಬಹುದು. ನಮ್ಮ ಯೋಗ, ಆಯುರ್ವೇದ ಪದ್ಧತಿಯನ್ನು ಯುರೋಪ, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಯುವಕರು ಈ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಚಿಕ್ಕವರಿದ್ದಾಗಲೆ ಇದರ ಬಗ್ಗೆ ನಮ್ಮ ಹಿರಿಯರು ಜಾಗೃತಿ ಮೂಡಿಸಬೇಕು. ಮಾಂಸಹಾರ ಸೇವನೆಯಿಂದ ಕೊಬ್ಬ ಜಾಸ್ತಿ ಸಂಗ್ರಹವಾಗಿ ಹೃದ್ರೋಗದಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆಯುರ್ವೇದಕ್ಕೆ ಅಂಟಿಕೊಂಡವರು ತರಕಾರಿ, ಸೊಪ್ಪು ಊಟ ಮಾಡಲು ಆರಂಭಿಸುತ್ತಾರೆ. ಕ್ರಮೇಣ ಅವರು ಮಾಂಸಹಾರ ಬಿಡುತ್ತಾರೆ ಎಂದರು.
ಅಂತಾರಾಷ್ಟ್ರೀಯ ಯೋಗ ದಿನವನ್ನು ನಮ್ಮ ವಿಜಯವಾಣಿಯ 10 ಆವೃತ್ತಿಗಳಲ್ಲಿ ಆಚರಿಸುತ್ತಿದ್ದೇವೆ. 2 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಭಾಗವಹಿಸುತ್ತಾರೆ. 2008ರಲ್ಲಿ ನಾವು ಯೋಗಗುರು ಬಾಬಾ ರಾಮದೇವ್ ಅವರನ್ನು ಹುಬ್ಬಳ್ಳಿಗೆ ಕರೆಯಿಸಿದ್ದೆವು. ಕೋವಿಡ್‌ಗಿಂತ ಮುನ್ನವೂ ನಾವು ರಾಮದೇವ್ ಬಾಬಾರನ್ನು ಆಹ್ವಾನಿಸಿದ್ದೆವು. ನಮ್ಮ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ನಮ್ಮ ಸಿಬ್ಬಂದಿಗಾಗಿಯೇ ಯೋಗ ಶಿಬಿರ ಆಯೋಜಿಸುತ್ತಿದ್ದೇವೆ ಎಂದರು.
ಕೆಎಂಸಿಆರ್‌ಐ ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ ಮಾತನಾಡಿ, ಗುರು-ಶಿಷ್ಯರ ಸಂಬಂಧ ಅಮೂಲ್ಯವಾದದು. ಬೋಧನೆಗೆ ಸಂಬಂಧಿಸಿದಂತೆ ಶಿಕ್ಷಕರು, ವಿದ್ಯಾರ್ಥಿಗಳೊಟ್ಟಿಗೆ ಬೆರೆತು ಪಾಠ ಮಾಡಬೇಕು. ವಿದ್ಯಾರ್ಥಿಗಳು ಕೂಡ ಅಧ್ಯಯನಶೀಲರಾಗಿರಬೇಕು. ಅಂದಾಗ ಭವಿಷ್ಯ ಉಜ್ವಲವಾಗಿರುತ್ತದೆ. ಇಲ್ಲವಾದರೆ ಮುಂದಿನ ಪೀಳಿಗೆಗೆ ನಾವು ಕೊಡಲು ಕುರುಹು ಇರುವುದಿಲ್ಲ ಎಂದರು.
ಇದೇ ವೇಳೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಡಾ. ಮಹಾವೀರ ಹಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ. ಮಹೇಶ ಸಾಲಿಮಠ ವಾರ್ಷಿಕ ವರದಿ ಓದಿದರು.
ಹಿರಿಯ ಹಳೆಯ ವಿದ್ಯಾರ್ಥಿಗಳ ಸಂಘದ ಮಾಜಿ ಅಧ್ಯಕ್ಷ ಡಾ.ಜಿ.ಎಚ್. ನರೇಗಲ್, ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಉಪಾಧ್ಯಕ್ಷ ಡಾ. ಪಾಂಡುರಂಗ ಗಂಡಮಾಲಿ, ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ, ಸಂಘದ ಪದಾಧಿಕಾರಿಗಳಾದ ಡಾ. ಭರತ್ ದಿವಟೆ, ಡಾ. ಮಹ್ಮದ್ ಖಾಸಿಂ, ಇತರರು ಇದ್ದರು.